
ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರಂಟಿ ಈಡೇರಿಸುತ್ತೇವೆ: ರಾಮಲಿಂಗಾರೆಡ್ಡಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಣೆ ಸಂಬಂಧ ಇಂದು (ಮೇ.30) ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ನಾಲ್ಕು ನಿಗಮಗಳ ವ್ಯವಸ್ಥಾಪಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಉಚಿತ ಪ್ರಯಾಣ ನೀಡುವ ಬಗ್ಗೆ ಹಾಗೂ ಅದಕ್ಕೆ ತಗಲುವ ವೆಚ್ಚದ ಬಗ್ಗೆ ವರದಿ ಸಿದ್ದವಾಗಿದ್ದು ಬುಧವಾರ ಮಧ್ಯಾಹ್ನ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು. ಕಾಂಗ್ರೆಸ್ ಗ್ಯಾರಂಟಿಗಳು ಖಂಡಿತ ಈಡೇರುತ್ತವೆ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವೆಂದ ಹೇಳೀದ್ದು ಅದನ್ನು ಈಡೇರಿಸುತ್ತೇವೆ. ಎಂದರು.
ಉಚಿತ ಪ್ರಯಾಣದ ಅನೂಕೂಲ ಹಾಗೂ ಅನಾನೂಕೂಲದ ಬಗ್ಗೆ ಅಧಿಕಾರಿಗಳು ವಿಸ್ತೃತ ವರದಿ ಸಿದ್ದಪಡಿಸಿದ್ದು ಕೆಎಸ್ ಆರ್ ಟಿ ಸಿ, ಬಿ ಎಂಟಿಸಿ ವಾಯುವ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ನಿಗಮಗಳಿಂದ ಮಾಹಿತಿ ಪಡೆಯಲಾಗಿದೆ. ಎಷ್ಟು ಮಹಿಳೆಯರು ಓಡಾಡುತ್ತಾರೆ ಅದಕ್ಕೆ ತಗಲುವ ವೆಚ್ಚ ಎಷ್ಟು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ವರದಿಯಲ್ಲಿದೆ ಎಂದರು.
ಶಾಂತಿನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಸಭೆ ನಡೆಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಾರಿಗೆ ನಿಗಮಗಳ ಎಂಡಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ. ಇಂದಿನ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆಯ ವರದಿ ಸಲ್ಲಿಸುತ್ತೇವೆ. ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ನಿನ್ನೆ (ಮೇ.29) ಸಿಎಂ ಸಿದ್ದರಾಮಯ್ಯನವರು ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿಸಿದರು.
ಕೊರೋನಾ ಸಂದರ್ಭದಲ್ಲಾದ ನಷ್ಟದ ಬಗ್ಗೆ ಚರ್ಚೆ ನಡೆಸಿದ್ದೇನೆ. ನಮ್ಮ ಸಾರಿಗೆ ಇಲಾಖೆ ದೇಶದಲ್ಲೇ ಪ್ರತಿಷ್ಠಿತ ಸಂಸ್ಥೆಯಾಗಿದೆ. 4 ಸಾರಿಗೆ ನಿಗಮಗಳಿಗೆ 350ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ. 4 ಸಾರಿಗೆ ನಿಗಮಗಳಲ್ಲಿ 240 ಘಟಕಗಳು ಕಾರ್ಯನಿರ್ವಹಣೆ ಮಾಡುತ್ತಿವೆ. 23,978 ವಾಹನಗಳಿವೆ, 1,04,450 ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ನಿತ್ಯ ರಾಜ್ಯಾದ್ಯಂತ 82,51 ಲಕ್ಷ ಪ್ರಯಾಣಿಕರು ಓಡಾಡ್ತಾರೆ. ನಾಲ್ಕು ನಿಗಮಗಳ ನಿತ್ಯದ ಒಟ್ಟು ಆದಾಯ 2,31,332 ಲಕ್ಷ ರೂ. ಇದೆ ಎಂದು ತಿಳಿಸಿದ್ದಾರೆ.