ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ: ಸಿಎಂ ಬೊಮ್ಮಾಯಿ

Spread the love

ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ: ಸಿಎಂ ಬೊಮ್ಮಾಯಿ

ಮೈಸೂರು: ಜಿಲ್ಲೆಯಲ್ಲಿ 18ಲಕ್ಷ ಕುಟುಂಬಗಳಿಗೆ ಸರ್ಕಾರದ ಒಂದಲ್ಲಾ ಒಂದು ಯೋಜನೆ ತಲುಪಿದೆ. ರಾಜ್ಯದ ಐದೂವರೆ ಕೋಟಿ ಜನರು ಸರ್ಕಾರದ ಯೋಜನೆಯ ಲಾಭ ಪಡೆದಿದ್ದಾರೆ. ಇಂತಹ ಜನಪರ ಸರ್ಕಾರ ನಿಮ್ಮೊಂದಿಗಿದ್ದು, ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಆಶೀರ್ವಾದ ಮಾಡಿದರೆ ನವಕರ್ನಾಟಕ ನಿರ್ಮಾಣ ಮಾಡುವುದರೊಂದಿಗೆ ಜನರ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಫಲಾನುಭವಿಗಳಿಗೆ ವಿವಿಧ ಇಲಾಖೆಯ ಸವಲತ್ತು ವಿತರಿಸಿ ಮಾತನಾಡಿದ ಅವರು, ನಮ್ಮದು ರೈತರು, ಕಾರ್ಮಿಕರ ದುಡಿಮೆಗೆ ಬೆಲೆ ನೀಡುವ ಸರ್ಕಾರವಾಗಿದ್ದು, ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ. ಹೇಳಿದ್ದನ್ನು ಮಾಡಿ ತೋರಿಸಿದೆ. ದುಡಿಯುವವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ದುಡಿಮೆಗೆ, ಬೆವರಿಗೆ ಬೆಲೆ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ನಮ್ಮ ಹಣೆಬರಹ ಬರೆಯುವ ಶಕ್ತಿ ದುಡಿಮೆಯಲ್ಲಿದೆ. ನಮ್ಮ ಬದುಕಿನಲ್ಲಿ, ಆರೋಗ್ಯದಲ್ಲಿ, ಶಿಕ್ಷಣದಲ್ಲಿ ಬದಲಾವಣೆಯಾಗುತ್ತದೆ. ಆ ಬದಲಾವಣೆಗೆ ಎಲ್ಲ ರೀತಿಯ ಶಕ್ತಿಯನ್ನು ನಮ್ಮ ಸರ್ಕಾರ ನೀಡುತ್ತದೆ. ಜನಪರವಾಗಿರುವ ಸರ್ಕಾರ ಬಂದು ನಿಮ್ಮ ಬದುಕು ಉಜ್ವಲವಾಗಲು ನಮಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಕೋವಿಡ್ ಸಂದರ್ಭದಲ್ಲಿ 130 ಕೋಟಿ ಜನರಿಗೆ ಎರಡು ಡೋಸ್ ಉಚಿತ ಲಸಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೆರವಾದರು. ಕಿಸಾನ್ ಸಮ್ಮಾನ್ ಯೋಜನೆಯಡಿ 54 ಲಕ್ಷ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 10 ಸಾವಿರ ನೀಡುತ್ತಿವೆ. ರೈತ ವಿದ್ಯಾನಿಧಿ ಯೋಜನೆ ಮೈಸೂರಿನ 20ಸಾವಿರ ಮಂದಿ ಸೇರಿದಂತೆ 13 ಲಕ್ಷ ರೈತರ ಮಕ್ಕಳಿಗೆ 10 ಸಾವಿರದವರೆಗೆ ಶಿಷ್ಯ ವೇತನ ನೀಡಲಾಗಿದೆ. ಹೆಣ್ಣು ಮಕ್ಕಳಿಗೆ ಪದವಿವರೆಗೂ ಉಚಿತ ಶಿಕ್ಷಣ, ಉಚಿತ ಬಸ್ ಪಾಸ್, 4 ಸಾವಿರ ಅಂಗನವಾಡಿಗಳ ಸ್ಥಾಪನೆ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ಸ್ವಯಂ ಉದ್ಯೋಗ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಆಸಿಡ್ ದಾಳಿಗೊಳಗಾದ ಹೆಣ್ಣು ಮಕ್ಕಳಿಗೆ ಮಾಸಿಕ 10 ಸಾವಿರ, ಶ್ರವಣದೋಷವುಳ್ಳ ಮಕ್ಕಳಿಗೆ ಶ್ರವಣ ಸಾಧನ ನೀಡಲು 500 ಕೋಟಿ ಮೀಸಲಿಟ್ಟಿದೆ. ಕ್ಯಾನ್ಸರ್ ಕೇಂದ್ರಗಳು, ನಮ್ಮ ಕ್ಲಿನಿಕ್, ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ಸಾಮಾನ್ಯರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿವೆ. 30ಲಕ್ಷ ರೈತರಿಗೆ 25 ಸಾವಿರ ಕೋಟಿ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. 5ಲಕ್ಷದವರೆಗೂ ಸಾಲ ಪಡೆಯುತ್ತಿದ್ದಾರೆ ಎಂದರು.

ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಎಂಎಲ್‌ಸಿ ಮುನಿರಾಜುಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ರೂಪಾ, ಮೈಲ್ಯಾಕ್ ಅಧ್ಯಕ್ಷ ಆರ್.ರಘು, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ.ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ಇದ್ದರು.


Spread the love

Leave a Reply

Please enter your comment!
Please enter your name here