
ಸರ್ಕಾರ ರೈತರ ಸಮಸ್ಯೆ ಈಡೇರಿಸಲಿ: ಕುರುಬೂರು ಶಾಂತಕುಮಾರ್
ಮೈಸೂರು: ನೂತನ ಸರ್ಕಾರ ರೈತರ ಸಮಸ್ಯೆಗಳ ಪರಿಹಾರಕ್ಕೆ ಗಮನ ಕೊಡಬೇಕು. ರಾಜ್ಯದ 30 ಲಕ್ಷ ಕಬ್ಬು ಬೆಳೆಗಾರರ ರೈತರ ಹಿತದೃಷ್ಟಿಯಿಂದ ನೂತನ ಸರ್ಕಾರದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ನೀತಿಗಳಿಂದ ರೈತರ ಆಕ್ರೋಶಕ್ಕೆ ಗುರಿಯಾಗಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡಿತು. ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು. ರೈತರ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜಾರಿಗೊಳಿಸಬೇಕು. ಸರ್ಕಾರಿ ಆದೇಶಗಳನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಉಲ್ಲಂಘನೆ ಮಾಡುತ್ತಿರುವುದರಿಂದ ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗುತ್ತಿಲ್ಲ. ಈ ಬಗ್ಗೆ ನೂತನ ಮುಖ್ಯಮಂತ್ರಿಯವರು ಗಂಭೀರ ಚಿಂತನೆ ಮಾಡಬೇಕು ಎಂದರು.
ಕೃಷಿ ಪಂಪ್‌ಸೆಟ್‌ಗಳಿಗೆ ರೈತರು ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡುವುದಕ್ಕೆ ವಿರೋಧವಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಸಬ್ಸಿಡಿ ನಿಲ್ಲಿಸಲು ಕೇಂದ್ರ ಸರ್ಕಾರ ಯತ್ನಿಸಿದೆ. ಖಾಸಗೀಕರಣದ ಬಾಗಿಲು ತೆರೆದಿದ್ದು, ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್, ಸಬ್ಸಿಡಿ ಇಲ್ಲದೆ ರೈತರು ನೆಲ ಸಮವಾಗುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಇದನ್ನು ಜಾರಿ ಮಾಡಬಾರದು. ನೂತನ ಸರ್ಕಾರ ಇದಕ್ಕೆ ತಡೆಹಾಕಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಕಬ್ಬಿಗೆ ಎಫ್‌ಆರ್‌ಪಿ ಹೆಚ್ಚುವರಿ ದರ ನಿಗದಿಗೆ ಒತ್ತಾಯಿಸಿದ್ದರು. ರೈತರ ೩೯ ದಿನಗಳ ಹೋರಾಟದ ಹಿನ್ನೆಲೆಯಲ್ಲಿ ಪ್ರತಿ ಟನಗೆ 150 ರೂ ನಿಗದಿಪಡಿಸಿ ಆದೇಶ ಹೊರಡಿಸಿದ್ದರೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಲಾಗಿದೆ. ನೂತನ ಸರ್ಕಾರ ತಕ್ಷಣವೇ ತಡೆಯಾಜ್ಞೆ ತೆರವುಗೂಳಿಸಿ ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳಿಂದ ಹಣ ಕೊಡಿಸಬೇಕು. ಹಿದಿನ ಸರ್ಕಾರ ಜಾರಿಗೊಳಿಸಿದ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆ, ಭೂ ಸುಧಾರಣೆ ಕಾಯ್ದೆ ರದ್ದು ಮಾಡಬೇಕು. ಕ್ನಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಶಾಸನ ಜಾರಿ ಭರವಸೆ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಚುನಾವಣೆಯಲ್ಲಿ ಭಾರಿ ಅಕ್ರಮ ವ್ಯವಹಾರಗಳು ನಡೆದಿವೆ. ಚುನಾವಣಾ ಆಯೋಗದ ಅಧಿಕಾರಿಗಳು ನಿಯಂತ್ರಣ ಮಾಡುವಲ್ಲಿ ವಿಫಲರಾಗಿದ್ದಾರೆ. ಚುನಾವಣೆ ನಂತರವೂ ಬೆಟ್ಟಿಂಗ್ ಭರಾಟೆ ಎಗ್ಗಿಲ್ಲದೆ ನಡೆದಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಜಾರಿಯಾಗಲಿಲ್ಲ. ಇದು ಮುಂದಿನ ಚುನಾವಣೆಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಚುನಾವಣಾ ಆಯೋಗವೇ ಬಹಿರಂಗ ಜೂಜಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಳ್ಳಿಗಳಲ್ಲಿ ದ್ವೇಷದ ವಿಷಬೀಜ ಬಿತ್ತಲು ಕಾರಣವಾಗುತ್ತದೆ. ಚುನಾವಣೆ ದುರ್ಬಲವಾದರೆ ಮತ್ತಷ್ಟು ಗೋಮುಖ ವ್ಯಾಘ್ರಗಳು, ಸಮಾಜಘಾತಕ ಶಕ್ತಿಗಳು ಚುನಾವಣೆಗೆ ನಿಲ್ಲುವಂತಾಗುತ್ತದೆ. ಈ ಬಗ್ಗೆ ಆಯೋಗ ಕಠಿಣ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಮೈಸೂರು ಜಿಲ್ಲೆ ಮಹಿಳಾ ಅಧ್ಯಕ್ಷೆ ಕಮಲಮ್ಮ, ತಾಲೂಕು ಅಧ್ಯಕ್ಷ ಲಕ್ಷ್ಮೀಪುರ ವೆಂಕಟೇಶ್ ಇದ್ದರು.