
ಸಲಿಂಗ ವಿವಾಹ: ಹಿಂದೂ ವಿದ್ವಾಂಸರೊಂದಿಗೆ ಸುಪ್ರೀಂ ಕೋರ್ಟ್ ಚರ್ಚಿಸಲಿ – ಪೇಜಾವರ ಶ್ರೀ ಅಭಿಪ್ರಾಯ
ಬಾಗಲಕೋಟೆ: ಸಲಿಂಗಿಗಳ ವೈವಾಹಿಕ ಜೀವನಕ್ಕೆ ಮುದ್ರೆ ಒತ್ತುವ ಮುನ್ನ ಕೇಂದ್ರ ಹಾಗೂ ಸುಪ್ರೀಂ ಕೋರ್ಟ್ ಹಿಂದೂ ಸಮಾಜದ ವಿದ್ವಾಂಸರು, ಧರ್ಮಶಾಸ್ತ್ರಜ್ಞರೊಂದಿಗೆ ವಿಚಾರ, ವಿಮರ್ಶೆ ಮಾಡಿ ಮುಂದಿನ ಕ್ರಮ ಕೈಗೊಳ್ಳ ಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವೈವಾಹಿಕ ಜೀವನಕ್ಕೆ ತನ್ನದೇ ಆದ ಪಾವಿತ್ರ್ಯಕವಿದೆ. ಈ ಸಲಿಂಗಿಗಳಿಗೆ ವೈವಾಹಿಕ ಜೀವನದ ಮುದ್ರೆ ಒತ್ತುವುದು ಸಲ್ಲದು. ಹಿಂದೂ ಸಮಾಜ ವಿದ್ವಾಂಸರನ್ನು, ಧರ್ಮಶಾಸ್ತ್ರ ಅರಿತವರನ್ನು ಜೊತೆ ಸೇರಿಸಿ ವಿಚಾರ ವಿಮರ್ಶೆ ಕೈಗೊಳ್ಳಬೇಕು. ಆದರೆ ಸುಪ್ರೀಂ ನೇರವಾಗಿ ತೀರ್ಪು ಕೊಡುವ ಮೂಲಕ ಸಮಾಜದ ಭಾವನಾತ್ಮಕ ವಿಚಾರಗಳು, ಶಾಸ್ತ್ರೀಗಳ ವಿಚಾರಗಳ ಮೇಲೆ ನೇರವಾಗಿ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದರು.
ಸಲಿಂಗಿ ವಿವಾಹಗಳಿಗೆ ಪ್ರತ್ಯೇಕ ಸೌಲಭ್ಯ, ಇನ್ನೊಂದಕ್ಕೆ ಪ್ರತ್ಯೇಕ ಸೌಲಭ್ಯ ಎಂದರೆ ಕೊನೆಯಿಲ್ಲದಂತಾಗುತ್ತದೆ. ಸಮಾಜದಲ್ಲಿ ನಾವು ಸಮಾನತೆ ಸ್ವೀಕರಿಸಿದ್ದೇವೆ ಈಗಾಗಲೇ ಇರುವ ಮೀಸಲಾತಿ ಸೌಲಭ್ಯದಿಂದ ಗೊಂದಲ ಸೃಷ್ಠಿಯಾಗಿದೆ ಮತ್ತಷ್ಟು ವಿಷಯಗಳನ್ನು ಆ ಪಟ್ಟಿಗೆ ಸೇರಿಸುವುದು ಸೂಕ್ತವಲ್ಲ ಎಂದರು.
ಸುಪ್ರೀಂ ಕೋರ್ಟಿಗೆ ಘನತೆ ಇದೆ ಅದರ ತೀರ್ಪನ್ನು ಒಪ್ಪುತ್ತೇವೆ. ರಾಜಪ್ರಭುತ್ವ ನಮ್ಮಲ್ಲಿಲ್ಲ ಅಡ್ಡಬಾಗಿಲ ಮೂಲಕ ನಿರ್ಧಾರವಾದದ್ದು ಎಂಬ ಭಾವನೆ ಬರಬಾರದು. ರಾಜಪ್ರಭುತ್ವದ ಇನ್ನೊಂದು ಮುಖ ಆಗಬಾರದು ಎಂದರು.