ಸಹಕಾರ ಸಂಘಗಳು ಬಡವರ ಸಂಜೀವಿನಿ: ಜಿ.ಟಿ.ದೇವೇಗೌಡ

Spread the love

ಸಹಕಾರ ಸಂಘಗಳು ಬಡವರ ಸಂಜೀವಿನಿ: ಜಿ.ಟಿ.ದೇವೇಗೌಡ

ಮೈಸೂರು: ರೈತರು, ಬಡವರು ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ಧಾವಿಸಿ ಸಂಜೀವಿನಿಯಾಗಿದ್ದು ಸಹಕಾರ ಸಂಘಗಳು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ದೇವರಾಜ ಮೊಹಲ್ಲಾದ ಆಲಮ್ಮ ಛತ್ರದಲ್ಲಿ ಮೈಸೂರು ಸಿಟಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಭಾನುವಾರ ಆಯೋಜಿಸಿದ್ದ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬಡವರು, ಮಧ್ಯಮ ವರ್ಗದವರಿಗೆ ಸಂಜೀವಿನಿಯಂತಿರುವ ಸಹಕಾರ ಸಂಘಗಳನ್ನು ಮೈಸೂರು ಅರಸರು ಶತಮಾನಕ್ಕೂ ಹಿಂದೆಯೇ ಸ್ಥಾಪಿಸಿದ್ದರು. ಆಗಿನ ಸಹಕಾರಿಗಳ ತ್ಯಾಗದಿಂದಲೇ ಸಂಘಗಳು ಆರ್ಥಿಕವಾಗಿ ಸಬಲವಾದವು. ರೈತರು, ಬಡವರು ಸಂಕಷ್ಟಕ್ಕೆ ಸಿಲುಕಿದಾಗ ಸಾಲ ಸೌಲಭ್ಯ ನೀಡಿ ಜೀವನ ಕಟ್ಟಿಕೊಡುವ ಮೂಲಕ ಸರ್ಕಾರ ಮಾಡದ ಕಲ್ಯಾಣ ಕೆಲಸಗಳನ್ನು ಸಂಘಗಳು ಮಾಡಿವೆ ಎಂದು ಶ್ಲಾಘಿಸಿದರು.

ಜವಹರಲಾಲ್ ನೆಹರೂ, ಲಾಲ್‌ಬಹದ್ದೂರ್ ಶಾಸ್ತ್ರಿ ಮೊದಲಾದ ಪ್ರಧಾನಿಗಳು ಸಹಕಾರ ಸಂಘ ಬಲಿಷ್ಠಗಳೊಳ್ಳಲು ಸಹಕರಿಸಿದರು. ಪ್ರತಿ ಗ್ರಾಮದಲ್ಲೂ ಗ್ರಾಮ ಪಂಚಾಯಿತಿ, ಸಹಕಾರ ಸಂಘ ಹಾಗೂ ಶಾಲೆಯಿದ್ದರೆ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂಬುದು ಮಹಾತ್ಮ ಗಾಂಧೀಜಿ ಅಭಿಪ್ರಾಯವಾಗಿತ್ತು. ವರ್ಗೀಸ್ ಕುರಿಯನ್ ಅವರ ಅಮುಲ್ ಕ್ರಾಂತಿ ದೇಶದಾದ್ಯಂತ ಹಾಲಿನ ಸಹಕಾರ ಸಂಘಗಳನ್ನು ಸ್ಥಾಪಿಸುವಂತೆ ಮಾಡಿತು ಎಂದು ನೆನೆದರು.

ಸಹಕಾರ ಸಂಘಗಳು ಆರಂಭವಾಗಿ ದಶಕಗಳು ಕಳೆದರೂ, ಸಂಘದ ಹೆಸರಿನಲ್ಲಿ ನೇರವಾಗಿ ಜಮೀನು ಖರೀದಿಸಲು ಕಾನೂನುಗಳು ಅಡ್ಡಿಯಾಗಿವೆ. ಸಂಘಗಳು ಗೊತ್ತುಪಡಿಸಿದ ಜಮೀನನ್ನು ಸರ್ಕಾರವೇ ಖರೀದಿಸಿ ಸಂಘಗಳಿಗೆ ನೀಡಿದರೆ ಜನರಿಗೆ ಹಂಚುವ ಕೆಲಸವನ್ನು ಸಂಘಗಳು ಮಾಡಲಿವೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಬ್ಯಾಂಕ್‌ಗಳು ಸಾಲವನ್ನೇ ನೀಡದಿದ್ದಾಗ ಮನೆ ದುರಸ್ತಿಗೆ ಸಾಲವನ್ನು ಸಂಘಗಳು ನೀಡಿವೆ. ನಗರ ಪ್ರದೇಶದ ಬಾಡಿಗೆ ಮನೆಗಳಲ್ಲಿ ಇರುವ ಜನರಿಗೆ ವಸತಿ ನಿವೇಶನಗಳನ್ನು ನೀಡಿರುವುದು ಅಭಿನಂದನೀಯ ಎಂದರು.

ಬಿಜೆಪಿ ಮುಖಂಡ ಸಿ.ಎಚ್.ವಿಜಯಶಂಕರ್ ಶತಮಾನೋತ್ಸವದ ಶಿಲಾಫಲಕ ಅನಾವರಣಗೊಳಿಸಿದರು. ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಉದ್ಯಮಿ ಬಿ.ಎಲ್.ನಾಗೇಂದ್ರ ಪ್ರಸಾದ್, ಸಹಕಾರ ಸಂಘಗಳ ನಿಬಂಧಕ ಜಿ.ಆರ್.ವಿಜಯ್‌ಕುಮಾರ್, ಸೊಸೈಟಿ ಅಧ್ಯಕ್ಷ ಎನ್.ಶ್ರೀನಿವಾಸ, ಉಪಾಧ್ಯಕ್ಷ ಕೆ.ಜಿ.ಶಂಕರನಾರಾಯಣ ಶಾಸ್ತ್ರಿ, ಕಾರ್ಯದರ್ಶಿ ಬಿ.ಎಸ್.ಶ್ರೀನಾಥ್, ಸದಸ್ಯರಾದ ಡಿ.ದೊಡ್ಡಯ್ಯ, ನಾರಾಯಣ ಸ್ವಾಮಿ ನಾಯ್ಡು, ಎಲ್.ವೆಂಕಟಕೃಷ್ಣಶಾಸ್ತ್ರಿ, ಮಂಜುನಾಥ, ಸೀತಾಲಕ್ಷ್ಮಿ, ಟಿ.ಶಾರದಮ್ಮ, ಬಿ.ನಾಗರಾಜು ಇದ್ದರು.


Spread the love