ಸಾಫ್ಟ್ ವೇರ್ ಇಂಜಿನಿಯರ್ ಆಗುವ ಕನಸು ಹೊತ್ತ ಹುಡುಗಿ ರಾಜ್ಯಕ್ಕೆ ತೃತೀಯ!

Spread the love

ಸಾಫ್ಟ್ ವೇರ್ ಇಂಜಿನಿಯರ್ ಆಗುವ ಕನಸು ಹೊತ್ತ ಹುಡುಗಿ ರಾಜ್ಯಕ್ಕೆ ತೃತೀಯ!

 
ಕುಂದಾಪುರ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವಿಜ್ಙಾನ ವಿಭಾಗ (ಪಿಸಿಎಂಸಿ)ದ ವಿದ್ಯಾರ್ಥಿ ನೇಹಾ ಜೆ ರಾವ್ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾಳೆ.

ನಗರದ ಆಶೀರ್ವಾದ ಜ್ಯುವೆಲ್ಲರಿಯ ಮಾಲೀಕ, ಬಸ್ರೂರು ಮೂರುಕೈ ನಿವಾಸಿ ಜಗದೀಶ್ ರಾವ್ ಹಾಗೂ ಸ್ಮಿತಾ ಜಗದೀಶ್ ರಾವ್ ದಂಪತಿಗಳ ಪುತ್ರಿಯಾಗಿರುವ ನೇಹಾ ಜೆ ರಾವ್ ಇಲ್ಲಿನ ವೆಂಕಟರಮಣ ಪಿಯು ಕಾಲೇಜಿನ ವಿಜ್ಙಾನ ವಿಭಾಗದ ವಿದ್ಯಾರ್ಥಿಯಾಗಿದ್ದಾಳೆ.

ಒಟ್ಟು 600 ಅಂಕಗಳಲ್ಲಿ 594 ಅಂಕಗಳನ್ನು ಪಡೆದುಕೊಂಡಿರುವ ನೇಹಾ, ಸಂಸ್ಕೃತದಲ್ಲಿ ಹಾಗೂ ಕಂಪ್ಯೂಟರ್ ನಲ್ಲಿ ಶೇ.100, ರಸಾಯನ ಶಾಸ್ತ್ರದಲ್ಲಿ ಹಾಗೂ ಗಣಿತದಲ್ಲಿ 99, ಇಂಗ್ಲೀಷ್ ಹಾಗೂ ಭೌತಶಾಸ್ತ್ರದಲ್ಲಿ 98 ಅಂಕಗಳನ್ನು ಪಡೆದುಕೊಂಡಿದ್ದಾರೆ.

ದಿನನಿತ್ಯ ಬೆಳಿಗ್ಗೆ ಐದು ಗಂಟೆಗೆ ಎದ್ದು ಓದುವ ಪರಿಪಾಠ ಬೆಳೆಸಿಕೊಂಡಿರುವ ನೇಹಾ ಬಳಿಕ ಕಾಲೇಜಿಗೆ ತೆರಳುತ್ತಾಳೆ. ಮತ್ತೆ ಸಂಜೆ ಮನೆಗೆ ವಾಪಾಸಾಗಿ ದಿನನಿತ್ಯದ ಪಾಠಗಳನ್ನು ಆಯಾಯ ದಿನಗಳಲ್ಲಿ ಓದಿ ಮುಗಿಸುತ್ತಾಳೆ. ಪರೀಕ್ಷಾ ಅವಧಿಯಲ್ಲಿ ವೇಳಾಪಟ್ಟಿ ತಯಾರಿಸಿ ಅದರಂತೆಯೇ ಓದುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾಳೆ.

ಕಲಿಯುವಿಕೆಯ ಜೊತೆಯಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಆಸಕ್ತಿ ಬೆಳೆಸಿಕೊಂಡಿರುವ ನೇಹಾ ಉತ್ತಮ ಭಾಷಣಗಾರ್ತಿ ಹಾಗೂ ಕಾರ್ಯಕ್ರಮ ನಿರೂಪಕಿಯಾಗಿಯೂ ಗಮನ ಸೆಳೆದಿದ್ದಾರೆ. ಕಾಲೇಜಿನ ಬಿಡುವಿನ ವೇಳೆಯಲ್ಲಿ ಪೇಟಿಂಗ್ ಮಾಡುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾಳೆ.

ಓದುವ ವಿಚಾರದಲ್ಲಿ ಬಹಳ ಮುಖ್ಯವಾಗಿ ನನ್ನ ತಂದೆ-ತಾಯಿ ನನಗೆ ಬೆಂಬಲವಾಗಿ ನಿಂತಿದ್ದಾರೆ. ಜೊತೆಗೆ ನನ್ನ ಅಜ್ಜ ಎನ್ಎನ್ ರೇವಣ್ಕರ್ ನಿವೃತ್ತ ಶಿಕ್ಷಕರಾದ್ದರಿಂದ ಮನೆಯಲ್ಲಿ ಓದಲು ಪೂರಕವಾದ ವಾತಾವರಣ ಕಲ್ಪಿಸಿ ಕೊಡುತ್ತಿದ್ದರು. ಪೋಷಕರು ನನ್ನ ವಿದ್ಯಾಭ್ಯಾಸದ ಎಲ್ಲಾ ಸ್ಥರದಲ್ಲಿಯೂ ನನಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರಿಂದಲೇ ನನ್ನಿಂದ ಈ ಸಾಧನೆ ಸಾಧ್ಯವಾಗಿದೆ. ಕಾಲೇಜಿನಿಂದಲೂ ನನಗೆ ಅಷ್ಟೇ ಉತ್ತಮವಾದ ಸಹಕಾರ ಸಿಕ್ಕಿದೆ. ಕಾಲೇಜಿನ ಪ್ರಾಂಶುಪಾಲರು, ತರಗತಿ ಉಪನ್ಯಾಸಕ ಸಂದೀಪ್ ಸರ್, ಮಮತಾ, ರಾಗಿಣಿ ಮ್ಯಾಮ್ ಎಲ್ಲರೂ ಸಹಾಯ ಮಾಡಿದ್ದಾರೆ. ನನಗೆ ಏನಾದರೂ ಸಂದೇಹಗಳಿದ್ದಾಗ ಅವರಲ್ಲಿ ಕೇಳಿಕೊಂಡಾಗ ಎಲ್ಲಾ ಸಮಯದಲ್ಲಿಯೂ ನನಗೆ ಸಹಕಾರವನ್ನು ನೀಡಿದ್ದಾರೆ ಎಂದು ನೇಹಾ ಕನ್ನಡಪ್ರಭದೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.


Spread the love