
ಸಾಬರಾಗಿ ಹುಟ್ಟಲು ತಡ ಏಕೆ, ಈಗಲೇ ಹೋಗಿ: ದೊಡ್ಡಗೌಡರಿಗೆ ಸಿ.ಟಿ.ರವಿ
ಮಂಡ್ಯ: ‘ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವೆ ಎಂದು ನಮ್ಮ ದೊಡ್ಡಗೌಡರು ಹೇಳಿದ್ದಾರೆ. ಸಾಬರ ಜನ್ಮ ಬೇಕು ಎನ್ನುವುದಾದರೆ ಯಾಕೆ ತಡ ಮಾಡುತ್ತೀರಿ, ಈಗಲೇ ಹೋಗಿ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬುಧವಾರ ಹೇಳಿದರು.
ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿದ ಅವರು ‘ಮುಸ್ಲಿಮರಲ್ಲಿ ಮುಂದಿನ ಜನ್ಮ ಎನ್ನುವುದೇ ಇಲ್ಲ, ಸ್ಮಶಾನಕ್ಕೆ ಹೋದವರನ್ನು ಅಲ್ಲಾಹು ಕರೆದುಕೊಂಡು ಹೋಗುತ್ತಾನೆ ಎನ್ನುತ್ತಾರೆ ಸಾಬರು. ಆದರೆ, ಇವರಿಗೆ ಹಿಂದೂಗಳ ವೋಟು ಬೇಕು, ಜನ್ಮ ಮಾತ್ರ ಸಾಬರದ್ದು ಬೇಕು. ಓಲೈಕೆಯ ರಾಜಕಾರಣವೇ ಇವರ ಧರ್ಮವಾಗಿದೆ’ ಎಂದು ಆರೋಪಿಸಿದರು.
‘ಹಿಂದೂಗಳನ್ನು ಕೊಂದ ಟಿಪ್ಪು ಜಪ ಮಾಡುವ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಬುದ್ಧಿ ಕಲಿಸಬೇಕು. ಟಿಪ್ಪು ಹಾಗೂ ಅವರ ಅಪ್ಪನ ಆಳ್ವಿಕೆ ಕಾಲದಲ್ಲಿ ಕನ್ನಡದ ಬದಲಿಗೆ ಪಾರ್ಸಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದರು. ಕಾಂಗ್ರೆಸ್ ಮುಖಂಡರು ಹಿಂದೂಗಳನ್ನು ಕೊಂದ ಕೊಲೆಗಡುಕ ಮುಸ್ಲಿಮರನ್ನೇ ಜಪಿಸುತ್ತಾರೆ. ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ, ಸಂತ ಶಿಶುನಾಳ ಶರೀಫ, ಡಾ.ಎಪಿಜೆ ಅಬ್ದುಲ್ ಕಲಾಂ ಅಂಥವರ ಜಪ ಮಾಡಿ’ ಎಂದರು
‘ಕಾಂಗ್ರೆಸ್ ಪಕ್ಷ ದಲಿತರ ಪರವಾಗಿ ಎಂದೂ ನಿಂತಿಲ್ಲ. ಖರ್ಗೆ, ಮರಿ ಖರ್ಗೆ ಉದ್ಧಾರವಾದ ಮಾತ್ರಕ್ಕೆ ದಲಿತರು ಉದ್ಧಾರವಾಗುವುದಿಲ್ಲ. ದಲಿತರ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ. ಜೆಡಿಎಸ್ ಮುಖಂಡರು ಗೌಡಿಕೆಯನ್ನು ಗುತ್ತಿಗೆ ಪಡೆದವರಂತೆ ಮಾತನಾಡುತ್ತಾರೆ. ನಾವೇನು ಗೌಡರಲ್ಲವೇ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್, ಜೆಡಿಎಸ್ ಮುಖಂಡರು ಸಂವಿಧಾನ ಎಂದರೆ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂದು ಅರ್ಥ ಮಾಡಿಕೊಂಡಿದ್ದಾರೆ. ಅವರು ಕುಟುಂಬಕ್ಕಾಗಿ ಕಣ್ಣೀರು ಹಾಕುತ್ತಾರೆ. ನಾವೂ ಕಣ್ಣೀರು ಹಾಕುತ್ತೇವೆ, ಆದರೆ ಕುಟುಂಬಕ್ಕಾಗಿ ಅಲ್ಲ, ದೇಶಭಕ್ತ ಹಿಂದೂಗಳು ಸತ್ತಾಗ ನೋವಿನಿಂದ ಕಣ್ಣೀರು ಹಾಕುತ್ತೇವೆ’ ಎಂದರು.
‘ಕುಂಕುಮ, ವಿಭೂತಿ ಕಂಡಗೆ ಭಯ ಎಂದವರಿಗೆ ವೋಟು ಹಾಕಬಾರದು. ಅವರಿಗೆ ಮತ ಹಾಕಿದರೆ ಕುಂಕುಮ, ವಿಭೂತಿಗೆ ಅವಮಾನ’ ಎಂದರು.