
ಸಾರಿಗೆ ನೌಕರರು ಮುಷ್ಕರ ಕೈಬಿಡಿ: ಚಂದ್ರಪ್ಪ
ಮೈಸೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆ ಕುರಿತಂತೆ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಮಧ್ಯಂತರ ವರದಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದು, ಕೊರೊನಾ ಕಾಲದಲ್ಲೂ ಸಿಬ್ಬಂದಿಗೆ ವೇತನ ನೀಡಿರುವುದನ್ನು ಪರಿಗಣಿಸಿ ಮುಷ್ಕರ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ.ಚಂದ್ರಪ್ಪ ಮನವಿ ಮಾಡಿದರು.
ನಗರದ ಬನ್ನಿಮಂಟಪದಲ್ಲಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟಿರುವ ನೌಕರರ ಬೇಡಿಕೆ ತಪ್ಪಿಲ್ಲ. ಆದರೆ, ಸರ್ಕಾರ ಕೊರೊನಾ ಸಂದರ್ಭದಲ್ಲೂ ಸಿಬ್ಬಂದಿಗೆ ವೇತನ ನೀಡಿದೆ. ನಷ್ಟದಲ್ಲೂ ಕೆಲವು ನಿಗಮಗಳನ್ನು ನಡೆಸಿಕೊಂಡು ಬಂದಿರುವುದನ್ನು ಅರ್ಥ ಮಾಡಿಕೊಳ್ಳಬೇಕು. ಶ್ರೀನಿವಾಸಮೂರ್ತಿ ಅವರು ಮಧ್ಯಂತರ ವರದಿ ನೀಡಿದ್ದಾರೆಯೇ ಹೊರತು ಪೂರ್ಣ ವರದಿ ಕೊಟ್ಟಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಕಾರಣ ಚರ್ಚಿಸಲು ಸಮಯ ಸಿಕ್ಕಿಲ್ಲ. ತಕ್ಷಣವೇ ಅವರನ್ನು ಭೇಟಿ ಮಾಡಿ ಸಮಾಲೋಚಿಸಲಾಗುವುದು. ಮುಷ್ಕರ ನಡೆಸಲು ಮುಂದಾಗಿರುವ ಸಂಘಟನೆಯ ಪ್ರಮುಖರು ಮಾತುಕತೆಗೆ ಮುಂದಾದರೆ ಸಮಾಲೋಚನೆ ನಡೆಸುತ್ತೇವೆ ಎಂದರು.
ಶ್ರೀನಿವಾಸಮೂರ್ತಿ ಮಧ್ಯಂತರ ವರದಿಯಲ್ಲಿ ಅಡೆತಡೆ ಇಲ್ಲದೆ ಪ್ರಯಾಣ, ಸಿಂಗಲ್ ಡೋರ್ ಬಸ್, ಕಂಡಕ್ಟರ್ ರಹಿತ ಬಸ್, ಇವಿ ಬಸ್ ಮೊದಲಾದ ಅಂಶಗಳನ್ನು ನೀಡಿದ್ದಾರೆ. ಪೂರ್ಣ ಪ್ರಮಾಣದ ವರದಿ ಬಂದ ಬಳಿಕ ಗೊತ್ತಾಗಲಿದೆ. ಕಳೆದ ನಾಲ್ಕು ವರ್ಷಗಳಿಂದ ಬಸ್ ಪ್ರಯಾಣ ದರ ಏರಿಕೆ ಮಾಡಿಲ್ಲ. 63ರೂ.ಇದ್ದ ಡೀಸೆಲ್ ಬೆಲೆ ಈಗ 100 ರೂ ಆಗಿದೆ. ಡೀಸೆಲ್ ದರ ಎರಡು ಪಟ್ಟು ಹೆಚ್ಚಾದರೂ ಪ್ರಯಾಣಿಕರ ಬಸ್ ದರ ಹೆಚ್ಚಳ ಮಾಡದಿರುವುದರಿಂದ ನಷ್ಟವಾಗುತ್ತಿದೆ. ಕೊರೊನಾ ಕಾಲದಲ್ಲಿ ಬಸ್ಗಳನ್ನು ಓಡಿಸದೆ ಇದ್ದರೂ ಸಿಬ್ಬಂದಿಗೆ ವೇತನ, ಡಿಎ ಪಾವತಿ ಮಾಡಲಾಗಿದೆ. ಹೊಸ ಬಸ್ಗಳನ್ನು ಖರೀದಿಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ನಿಗಮ ಆದಾಯಕ್ಕೆ ಮರಳಿದರೂ ಆಗಿರುವ ನಷ್ಟ ಭರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.