
ಸಾರ್ವಜನಿಕರಿಗೆ ಮಂಗಳಮುಖಿಯರಿಂದ ಕಿರಿಕಿರಿ ಆರೋಪ -13 ಮಂದಿ ವಶಕ್ಕೆ
ಮಂಗಳೂರು: ಸಾರ್ವಜನಿಕರಿಗೆ ಮಂಗಳಮುಖಿಯರ ಗುಂಪು ಕಿರಿಕಿರಿ ನೀಡಿದ ಘಟನೆಯೊಂದು ಮಂಗಳೂರು ನಗರದಲ್ಲಿ ಸಂಭವಿಸಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸರು 10ಕ್ಕೂ ಅಧಿಕ ಮಂಗಳಮುಖಿಯರನ್ನು ವಶಕ್ಕೆ ಪಡೆದಿದ್ದಾರೆ.
ಶನಿವಾರ ರಾತ್ರಿ ವೇಳೆ ಈ ಘಟನೆ ಸಂಭವಿಸಿದೆ. ನಗರದ ಆಸ್ಪತ್ರೆಯ ಎದುರು ಇರುವ ಮಾರ್ಗದಲ್ಲಿ ಹೋಗುತ್ತಿದ್ದವರ ಜೊತೆಯಲ್ಲಿ ಮಂಗಳಮುಖಿಯರ ಗುಂಪು ಅಸಭ್ಯ ವರ್ತನೆ ತೋರಿದೆ. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಇನ್ಸ್ಪೆಕ್ಟರ್ ಭಾರತಿ ಜೊತೆಗೆ ಮಂಗಳಮುಖಿಯರು ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸರು 13 ಮಂದಿ ಮಂಗಳಮುಖಿಯರನ್ನು ವಶಕ್ಕೆ ಪಡೆದಿದ್ದಾರೆ. ಊರ್ವ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ಶಾಂತಿಗೆ ಭಂಗ ತಂದ ಆರೋಪದ ಅಡಿಯಲ್ಲಿ ಕೇಸು ದಾಖಲಾಗಿದೆ.
ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ 13 ಮಂದಿ ಮಂಗಳಮುಖಿಯರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.