
ಸಾರ್ವಜನಿಕರ ಅಭಿಪ್ರಾಯ, ಆಕ್ಷೇಪಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು: ಡಿಸಿ ಮುಲ್ಲೈ ಮುಗಿಲನ್
ಮಂಗಳೂರು: ಸಾರ್ವಜನಿಕರಿಂದ ಸಂಗ್ರಹಿಸಿದ ಅಭಿಪ್ರಾಯ ಹಾಗೂ ಆಕ್ಷೇಪಣೆಗಳ ವಿಡಿಯೋ ಚಿತ್ರೀಕರಣ ಹಾಗೂ ಲಿಖಿತ ಹೇಳಿಕೆಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದರು.
ಅವರು ಜು.7ರ ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನವ ಮಂಗಳೂರು ಬಂದರು ಪ್ರಾಧಿಕಾರದಿಂದ ನೂತನ ಬರ್ತ್ ನಂ-17ರ ನಿರ್ಮಾಣ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಪ್ರಾದೇಶಿಕ ಕಚೇರಿ ಹಾಗೂ ನವ ಮಂಗಳೂರು ಬಂದರು ಪ್ರಾಧಿಕಾರದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನವ ಮಂಗಳೂರು ಬಂದರು ಪ್ರಾಧಿಕಾರದವು ವಿವಿಧೋದ್ದೇಶ ಕಾರ್ಗೋ ಬರ್ತ್ (ಬರ್ತ್ ನಂ-17) ಅನ್ನು 9ಎಂಎಂ ಟಿಪಿಎ ಸಾಮಥ್ರ್ಯದಲ್ಲಿ ಪಣಂಬೂರಿನ ನವ ಮಂಗಳೂರು ಬಂದರಿನಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿದೆ. ಪ್ರಸ್ತಾವಿತ ಯೋಜನೆಯಲ್ಲಿ ಕಬ್ಬಿಣದ ಅದಿರು, ರಸಗೊಬ್ಬರ, ಮರಳು, ಯಂತ್ರೋಪಕರಣಗಳು ಸೇರಿದಂತೆ ಇತ್ಯಾದಿಗಳನ್ನು ಸಂಗ್ರಹಿಸಲು ಹಾಗೂ ಇವುಗಳನ್ನು ಹೊತ್ತು ತರುವ ಹಡಗುಗಳನ್ನು ಲಂಗರು ಹಾಕುವ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ, ಈ ಯೋಜನೆಯ ಪ್ರವರ್ತಕರು ಪರಿಸರ ಆಘಾತ ಅಧ್ಯಯನ ಅಧಿಸೂಚನೆ 2006ರ ಸೆಪ್ಟಂಬರ್ 14ರಂತೆ (ತಿದ್ದುಪಡಿ ದಿನಾಂಕ:2009ರ ಡಿಸೆಂಬರ್-1) ಪ್ರಕಾರ ಪರಿಸರ ಸಾರ್ವಜನಿಕ ಆಲಿಕೆಯನ್ನು ನಡೆಸಬೇಕಾದ ಕಾರಣ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ, ಈ ಸಭೆಯಲ್ಲಿ ಸಾರ್ವಜನಿಕರಿಂದ ಲಿಖಿತವಾಗಿ ಹಾಗೂ ಮೌಖಿಕವಾಗಿ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಪಡೆಯಲಾಗಿದೆ, ಅಲ್ಲದೇ ಅದನ್ನು ವಿಡಿಯೋ ಚಿತ್ರೀಕರಿಸಲಾಗಿದೆ, ಅದರ ಕರಡು ಸಿದ್ದಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ನವ ಮಂಗಳೂರು ಬಂದರಿನ ಮುಖ್ಯ ಎಂಜಿನಿಯರ್ ಹರಿನಾಥ್ ಮಾತನಾಡಿ, 70 ಸಾವಿರದಿಂದ 1 ಲಕ್ಷ ಟನ್ ಸಾಮಥ್ರ್ಯದ ಸಾಮಗ್ರಿಗಳ ಆಮದಿಗೆ ಹೊಸ ಬರ್ತ್‍ನ ನಿರ್ಮಾಣದಿಂದ ಅನುಕೂಲವಾಗಲಿದೆ, ಪ್ರಸಕ್ತ 30 ರಿಂದ 40 ಸಾವಿರ ಟನ್ ಸಾಮಥ್ರ್ಯದ ಲೋಡ್ ಅನ್ನು ಮಾತ್ರ ಸಂಗ್ರಹಿಸಲು ಅವಕಾಶವಿರುವ ಕಾರಣ ಅಷ್ಟೇ ಪ್ರಮಾಣದ ಲೋಡ್‍ನ ಹಡಗುಗಳು ಮಾತ್ರ ಎನ್‍ಎಂಪಿಎಗೆ ಬರುತ್ತಿವೆ, ಅದಕ್ಕೂ ಹೆಚ್ಚಿನ ಸಾಮಥ್ರ್ಯದ ಲೋಡ್ ಹಡಗುಗಳು ಇಲ್ಲಿಂದ ಟ್ಯುಟಿಕೋರನ್ ಬಂದರಿನಲ್ಲಿ ಲಂಗುರು ಹಾಕುತ್ತವೆ, ನಂತರದಲ್ಲಿ ಪುನಃ ರಸ್ತೆ ಮಾರ್ಗವಾಗಿ ಮಂಗಳೂರಿಗೆ ಬರುತ್ತವೆ, ಆದ ಕಾರಣ ನೂತನ ಬರ್ತ್ ನಿರ್ಮಾಣದಿಂದ ಸಾಕಷ್ಟು ಅನುಕೂಲಗಳಿವೆ ಎಂದರು.
ಅಪರ ಜಿಲ್ಲಾಧಿಕಾರಿ ಮಾಣಿಕ್ಯ ವೇದಿಕೆಯಲ್ಲಿದ್ದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಭೀದ್ ಗಡ್ಯಾಳ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಪ್ರಾದೇಶಿಕ ಕಚೇರಿಯ ಹಿರಿಯ ಪರಿಸರ ಅಧಿಕಾರಿ ವಿಜಯ ಹೆಗಡೆ ಮಾತನಾಡಿದರು.
ಮಂಗಳೂರು ಪರಿಸರ ಅಧಿಕಾರಿ ಡಾ. ರವಿ ಸ್ವಾಗತಿಸಿದರು. ಜಿಲ್ಲೆಯ ಪರಿಸರ ಪ್ರೇಮಿಗಳು, ಸಾರ್ವಜನಿಕರು ಸಭೆಗೆ ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ಹಾಗೂ ಮೌಖಿಕವಾಗಿ ವ್ಯಕ್ತಪಡಿಸಿದರು.