ಸಾರ್ವಜನಿಕರ ಸಂಚಾರದ ಅಗತ್ಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಕಲ್ಪಿಸಿ: ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿ

Spread the love

ಸಾರ್ವಜನಿಕರ ಸಂಚಾರದ ಅಗತ್ಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಕಲ್ಪಿಸಿ: ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿ

ಮಂಗಳೂರು: ಸಾರ್ವಜನಿಕರ ಸುಗಮ ಪ್ರಯಾಣಕ್ಕೆ ಅವಶ್ಯಕತೆಗೆ ತಕ್ಕಂತೆ ಬಸ್ಸು ಸಂಚಾರಗಳನ್ನು ಪ್ರಾರಂಭಿಸಬೇಕು ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಯವರು ಸೂಚನೆ ನೀಡಿದರು.

ಅವರು ಇಂದು ನಗರದ ಸಕ್ರ್ಯೂಟ್ ಹೌಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ಹಾಗೂ ಪುತ್ತೂರು ವಿಭಾಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ಘೋೀಷಿಸಿದ ಹಿನ್ನೆಲೆಯಲ್ಲಿ 150 ಕ್ಕೂ ಹೆಚ್ಚು ಮಾರ್ಗಗಳ ಸಾರಿಗೆ ಬಸ್ಗಳನ್ನು ನಿಲ್ಲಿಸಲಾಗಿತ್ತು. ಸೋಂಕು ಗಣನೀಯವಾಗಿ ಕಡಿಮೆಯಾಗಿದ್ದು, ಜನಜೀವನ ಯಥಾಸ್ಥಿತಿಗೆ ಬಂದಿದ್ದು, ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡಿವೆ ಹಾಗೂ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು, ಜನ ಸಂಚಾರ ಯಥಾಸ್ಥಿತಿಗೆ ಬಂದಿದೆ. ಜನಸಾಮಾನ್ಯರೂ ಸೇರಿದಂತೆ ವಿದ್ಯಾರ್ಥಿಗಳ ಅವಶ್ಯಕತೆಗೆ ತಕ್ಕಂತೆ ಬಸ್ಗಳನ್ನು ಪುನರಾರಂಭಿಸಬೇಕೆಂದು ತಿಳಿಸಿದರು.

ಕೋವಿಡ್ ಸೋಂಕಿನಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ 4 ನಿಗಮಗಳಿಂದ 4ಸಾವಿರ ಕೋಟಿಗೂ ಹೆಚ್ಚು ಹಾನಿ ಉಂಟಾಗಿದೆ. ನಷ್ಟ ಭರಿಸಲು ಸರಕಾರದಿಂದ ಸಹಾಯಧನ ಪಡೆಯುವುದು ಸೇರಿದಂತೆ ಇಲಾಖೆಯಲ್ಲಾಗುವ ಸೋರಿಕೆ ಹಾಗೂ ಅನಾವಶ್ಯಕ ವೆಚ್ಚಗಳನ್ನು ಕಡಿತಗೊಳಿಸುವುದರೊಂದಿಗೆ ಹಾನಿಯನ್ನು ಸರಿದೂಗಿಸಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಬಸ್ಪಾಸ್ ಗಳ ವಿತರಣೆಯು ಸೇವಾ ಸಿಂಧುಗಳ ಮೂಲಕ ನೀಡುವುದು ವಿಳಂಭವಾಗುತ್ತಿರುವುದು ಕೇಳಿಬರುತ್ತಿದೆ, ಆದ್ದರಿಂದ ವಿದ್ಯಾರ್ಥಿಗಳಿಗೆ ಈ ಹಿಂದೆ ನೀಡುತ್ತಿದ್ದ ಹಳೆಯ ವ್ಯವಸ್ಥೆಯಲ್ಲೇ ಬಸ್ ಪಾಸ್ ಗಳನ್ನು ನೀಡಬೇಕೆಂದು ಸೂಚನೆ ನೀಡಿದರು.

ಕೆ.ಎಸ್.ಆರ್.ಟಿ.ಸಿ. ಚಾಲಕರು ಹಾಗೂ ನಿರ್ವಾಹಕರುಗಳಿಗೆ ಕರ್ತವ್ಯದ ಮಾರ್ಗ, ಹೆಚ್ಚುವರಿ ಕೆಲಸದ ಭತ್ಯೆ ನೀಡುವುದು ಸೇರಿದಂತೆ ಮತ್ತಿತರ ಕಾರ್ಯಗಳ ಸೂಚನೆ ನೀಡುವಾಗ ಯಾವುದೇ ರೀತಿಯ ತಾರತಮ್ಯವನ್ನು ಮೇಲಾಧಿಕಾರಿಗಳು ಮಾಡಬಾರದು ತಪ್ಪಿದಲ್ಲಿ ಅಂತಹಾ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿರುವ 2 ವಿಭಾಗದ ಬಸ್ ಡಿಪೋಗಳಲ್ಲಿ 9 ಲಕ್ಷಕ್ಕಿಂತ ಹೆಚ್ಚು ಕಿ.ಮೀ ಸಂಚರಿಸುವ ಬಸ್ಗಳು ಹಾಗೂ ಬಸ್ಗಳ ಸ್ಥಿತಿಗತಿಗಳು ಸೇರಿದಂತೆ ಮತ್ತಿತರ ಮಾಹಿತಿ ಪಡೆದು ಮಾತನಾಡಿ ಮುಂದಿನ ಬಜೆಟ್ನಲ್ಲಿ ಜಿಲ್ಲೆಗೆ ಅಗತ್ಯವಿರುವ ಹೊಸ ಬಸ್ಗಳನ್ನು ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಹೊಸದಾಗಿ ಬಸ್ ನಿಲ್ದಾಣ, ಡಿಪೋ ಸೇರಿದಂತೆ ಮತ್ತಿತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹೊಸದಾಗಿ ಕ್ರಿಯಾ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಅವರು ಅವುಗಳ ಅಗತ್ಯವಿರುವ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಾರಿಗೆ ನೌಕರರಿಗೆ ಕಳೆದ ಕೋವಿಡ್ -19 ಸಮಯದಲ್ಲಿ ನೌಕರರಿಗೆ ನೀಡದೆ ಇರುವ ವೇತನವನ್ನು ಶೀóರ್ಘದಲ್ಲೇ ನೀಡಲಾಗುವುದು ಎಂದ ಅವರು ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲು ಮುಂದಿನ ಮಾರ್ಚ್ ನಂತರ ಹಂತ ಹಂತವಾಗಿ ನೇಮಕಾತಿ ಮಾಡಲಾಗುತ್ತದೆ ಎಂದರು.

ಕೆ.ಎಸ್.ಆರ್.ಟಿ.ಸಿ ಬಸ್ಗಳ ಸಂಚಾರಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ರಹ ದಾರಿ ಪಡೆದು ಬಸ್ಗಳನ್ನು ಪ್ರಾರಂಭಿಸದೇ ಇದ್ದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಇದಕ್ಕೆ ಆಸ್ಪದ ನೀಡಬಾರದು ಇತರೆ ಖಾಸಗೀ ಬಸ್ಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲೆಗೆ ಹೊರಜಿಲ್ಲೆಗಳಿಂದ ಸಾಮಾನ್ಯವಾಗಿ ಹೆಚ್ಚು ಜನರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಸಂಚರಿಸುತ್ತಾರೆ ಅವರ ಊಟೋಪಚಾರಗಳಿಗೆ ಅನುಕೂಲವಾಗುವಂತೆ ಸಸ್ಯಹಾರಿ ಹೋಟೆಲ್ಗಳ ಮುಂದೆ ಬಸ್ ನಿಲ್ಲಿಸಲು ಸೂಚನೆ ನೀಡಬೇಕೆಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಆದೇಶಿಸಿದರು.

ಸಭೆಯಲ್ಲಿ ಜಿಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ಸುಬ್ರಹ್ಮಣ್ಯ ಹಾಗೂ ಬಂಟ್ವಾಳ ಸೇರಿದಂತೆ ಮತ್ತಿತರ ಕಡೆಯಲ್ಲಿ ಹೊಸದಾಗಿ ಬಸ್ ನಿಲ್ದಾಣ ಹಾಗೂ ಡಿಪೋಗಳನ್ನು ತೆರೆಯಲು ಅವಶ್ಯವಿರುವ ಜಾಗವನ್ನು ಗುರುತಿಸಿ ನೀಡಲಾಗುವುದು ಎಂದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಯಲ್ಲಿ 9 ಕಿ.ಮೀ ಅಂತರದ ಒಳಗೆ 2 ಟೋಲ್ ಗೇಟ್ಗಳು ಇದ್ದು, ಸ್ಥಳೀಯ ಜಿಲ್ಲೆಗಳ ವಾಹನಗಳಿಗೆ ರಿಯಾಯಿತಿ ನೀಡಲಾಗಿದ್ದರೂ ಸಹ ಜನರ ಸುಗಮ ಸಂಚಾರಕ್ಕೆ ವಾಹನ ದಟ್ಟಣೆಯಿಂದ ಸಂಚಾರ ಅಸ್ಥವ್ಯಸ್ಥವಾಗುತ್ತಿದೆ. ಎಂಬ ದೂರುಗಳು ಕೇಳಿಬರುತ್ತಿದೆ ಎಂಬ ವಿಷಯವನ್ನು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ವೈ, ಸಾರಿಗೆ ಆಯುಕ್ತರಾದ ಶಿವ ಕುಮಾರ್, ಕೆ.ಎಸ್.ಆರ್.ಟಿ.ಸಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಡಿಪೋ ಮ್ಯಾನೇಜರ್ಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Spread the love