ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಗೌರವ ವಂದನೆ ಬೇಡ – ಮುಖ್ಯಮಂತ್ರಿ ಬೊಮ್ಮಾಯಿ

Spread the love

ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಗೌರವ ವಂದನೆ ಬೇಡ – ಮುಖ್ಯಮಂತ್ರಿ ಬೊಮ್ಮಾಯಿ

ಉಡುಪಿ: ಇನ್ನು ಮುಂದೆ ಪೊಲೀಸರು ವಿಮಾನ ನಿಲ್ದಾಣ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಗೌರವ ವಂದನೆ ನೀಡುವುದು ಬೇಡ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಗುರುವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಇನ್ನು ಮುಂದೆ ತಾನು ಹೋಗುವಾಗ, ಬರುವಾಗ ಏರ್‌ಪೋರ್ಟ್, ರೈಲ್ವೆಸ್ಟೇಷನ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಗೌರವ ರಕ್ಷೆ ನೀಡುವುದು ಬೇಡ, ಇದರಿಂದ ಜನರಿಗೆ ತೊಂದರೆಯಾಗುತ್ತದೆ, ಈ ಬಗ್ಗೆ ಶೀಘ್ರ ಲಿಖಿತ ಆದೇಶ ಹೊರಡಿಸುವುದಾಗಿ ತಿಳಿಸಿದರು.

ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಹೂವಿನ ಹಾರ ಬಳಕೆ ನಿಷೇಧ ಹಿನ್ನಲೆಯಲ್ಲಿ ಪುಷ್ಪ ವ್ಯಾಪಾರಿಗಳ ಪ್ರತಿಭಟನೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡಬೇಕು ಎಂಬುದು ನನ್ನ ಉದ್ದೇಶ ಅಲ್ಲ. ಖಾಸಗಿಯಾಗಿ ಅವರು ಹೂವಿನ ವ್ಯಾಪಾರವನ್ನು ಮಾಡಬಹುದು . ಸರಕಾರಿ ಕಾರ್ಯಕ್ರಮದಲ್ಲಿ ಮಾತ್ರ ಹೂಗುಚ್ಚ ಹಾರ ತುರಾಯಿ ಬೇಡ ಎಂದಿದ್ದೇನೆ ಅಷ್ಟೇ ಎಂದರು.

ಅಲ್ಲದೆ ಯಾರೂ ಕೂಡ ಶುಭ ಕೋರುವ ಕಟೌಟ್ ಹೋರ್ಡಿಂಗ್ ಹಾಕಬೇಡಿ. ಪಕ್ಷದವರಿಗೆ ಮತ್ತು ಅಭಿಮಾನಿಗಳಿಗೆ ನಾನು ಮನೆಗೆ ಮಾಡುತ್ತೇನೆ. ನಾನು ಮುಖ್ಯಮಂತ್ರಿಯಾದರೂ ಈ ನಾಡಿನ ಸೇವಕ ಈ ಭಾವನೆ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೇನೆ ಎಂದರು.

ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ನಾನು ಯಾವುದೇ ಮ್ಯಾಜಿಕ್ಕನ್ನು ಮಾಡುತ್ತಿಲ್ಲ. ಪ್ರೀತಿ ಮತ್ತು ವಿಶ್ವಾಸವೇ ನಾನು ಮಾಡುತ್ತಿರುವ ಮ್ಯಾಜಿಕ್ ಎಂದರು.

ಕೋವಿಡ್ ಸಂದರ್ಭ 100000 ಸಾವು ಸಂಭವಿಸಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಎಲ್ಲಾ ಸಾವುಗಳು ಸರಕಾರದ ದಾಖಲೆಯಲ್ಲಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಸರ್ಕಾರದ ದಾಖಲೆಯಲ್ಲಿ ಇದೆ. ಅವರು ತಮ್ಮ ಹೇಳಿಕೆಗೆ ಆಧಾರ ಕೊಟ್ಟರೆ ಪರಿಶೀಲಿಸುತ್ತೇವೆ ಎಂದರು.


Spread the love