ಸಾರ್ವಜನಿಕ ಸ್ಥಳದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ, ಪೊಲಿಸ್‌ ಕರ್ತವ್ಯಕ್ಕೆ ಅಡ್ಡಿ – 7 ಮಂದಿಯ ಬಂಧನ

Spread the love

ಸಾರ್ವಜನಿಕ ಸ್ಥಳದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ, ಪೊಲಿಸ್‌ ಕರ್ತವ್ಯಕ್ಕೆ ಅಡ್ಡಿ – 7 ಮಂದಿಯ ಬಂಧನ

ಮಂಗಳೂರು: ನಗರದ ಬಳ್ಳಾಲ್‌ಬಾಗ್‌ನ ಸಾಯಿ ನೆಸ್ಟ್ ಸರ್ವಿಸ್ ಅಪಾರ್ಟ್‌ಮೆಂಟ್ ಎದುರು ಸಾರ್ವಜನಿಕ ಸ್ಥಳದಲ್ಲಿ ಯುವಕರ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಬರ್ಕೆ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಧೀರಜ್ ಶೆಟ್ಟಿ, ರಕ್ಷಿತ್ ಕೆ., ರೋಹಿತ್ ಶೆಟ್ಟಿ, ಹರ್ಷಿತ್, ಕೀರ್ತಿರಾಜ್, ವಿವೇಕ್, ರಾಹುಲ್ ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ಬರ್ಕೆ ಠಾಣಾ ಪೊಲೀಸ್ ಉಪನಿರೀಕ್ಷಕಿ ಶೋಭಾ ರಾತ್ರಿ ರೌಂಡ್ಸ್ ನಡೆಸುತ್ತಿದ್ದ ವೇಳೆ ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದ ವೇಳೆ ಎರಡು ತಂಡಗಳ ಹೊಡೆದಾಟ ನಡೆಯತ್ತಿದ್ದು, ಗಲಾಟೆ ಬಿಡಿಸಲು ಪ್ರಯತ್ನಿಸಿದ್ದಾರೆ. ಗುಂಪಿನಲ್ಲಿದ್ದ ಕೆಲವು ಸ್ಥಳೀಯ ಯುವಕರ ಪರಿಚಯವಿದ್ದ ಮಹಿಳಾ ಪೊಲೀಸ್ ಅಧಿಕಾರಿ ಗುಂಪಿನಲ್ಲಿದ್ದವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಈ ವೇಳೆ ಧೀರಜ್ ಎಂಬಾತ ಉಪನಿರೀಕ್ಷಕಿ ಶೋಭಾ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಶೋಭಾರ ಕೈಯಲ್ಲಿದ್ದ ವಾಕಿಟಾಕಿ ಕಿತ್ತೆಸೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದನೆನ್ನಲಾಗಿದೆ.ಈ ಸಂದರ್ಭ ಸ್ಥಳಕ್ಕೆ ಪಿಎಸ್ಸೈ ಹಾರೂನ್ ಅಖ್ತರ್ ಹಾಗೂ ಇತರ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಸುಮಾರು 15ರಿಂದ 20 ಜನರ ಯುವಕರ ತಂಡ ಪರಸ್ಪರ ಒಬ್ಬರನ್ನೊಬ್ಬರು ಎಳೆದಾಡಿಕೊಂಡು ಮರದ ವಿಕೆಟ್, ಪೈಪ್ ಕಲ್ಲುಗಳನ್ನು ಹಿಡಿದು ಹಲ್ಲೆ ನಡೆಸಿದ್ದು, ಅಲ್ಲಿದ್ದ ವಾಹನಗಳನ್ನೂ ಜಖಂಗೊಳಿಸಿದ್ದಾರೆ. ಘಟನೆಯಲ್ಲಿ ಒಂದು ಚತುಷ್ಕಕ್ರ, ಆರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರ್ಕೆ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love