
ಸಾಲೂರಿನಲ್ಲಿ ಏಳು ಜೋಡಿಗಳು ಒಂದಾಗಿದ್ದು ಹೇಗೆ?
ಚಾಮರಾಜನಗರ: ಸಾಮೂಹಿಕ ವಿವಾಹಕ್ಕೆ ಇದುವರೆಗೂ ಮೂಹೂರ್ತ ಕೂಡಿ ಬಾರದ ಹಿನ್ನಲೆಯಲ್ಲಿ ಬೇಸತ್ತ ಏಳು ಜೋಡಿಗಳು ತಮ್ಮ ಸ್ವಂತ ಹಣದಲ್ಲಿ ವಿವಾಹ ಮಾಡಿಕೊಂಡಿರುವ ಘಟನೆ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದ್ದ ಸಾಮೂಹಿಕ ವಿವಾಹ ಎರಡು ಬಾರಿ ಮುಂದೂಡಿಕೆಯಾಗಿದೆ. ಹೀಗಾಗಿ ಕ್ಷೇತ್ರದಲ್ಲಿರುವ ಸಾಲೂರು ಮಠದಲ್ಲಿ ಏಳು ಜೋಡಿಗಳು ಹಸೆಮಣೆ ಏರಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ. 23 ರಂದು ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ, ಈ ದಿನಾಂಕ ಮುಂದೂಡಿಕೆಯಾಗಿ ಬಳಿಕ ಆ. 28ರಂದು ನಿಗದಿಯಾಗಿತ್ತು. ಆದರೆ ಈಗ ಆ.28ರಂದು ನಿಗದಿಯಾಗಿದ್ದ ಸಾಮೂಹಿಕ ವಿವಾಹ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ. ಇದು ಭಕ್ತರು ಬೇಸರಕ್ಕೆ ಕಾರಣವಾಗಿದೆ.
ಮಲೆಮಾದಪ್ಪನ ಸನ್ನಿಧಿಯಲ್ಲಿ ವಿವಾಹವಾದರೆ ಶುಭ ಎಂಬ ನಂಬಿಕೆಯಿದೆ. ಈ ಹಿನ್ನೆಲೆ ಈಗಾಗಲೇ 67ಜೋಡಿಗಳು ನೋಂದಣಿ ಮಾಡಿಕೊಂಡಿದ್ದರು. ಆದರೆ, ಈಗ ಎರಡು ಬಾರಿ ವಿವಾಹ ದಿನಾಂಕ ಮುಂದೂಡಿಕೆ ಆಗಿದೆ. ಇದರಿಂದ ಬೇಸರಗೊಂಡು ಸಾಲೂರು ಮಠದಲ್ಲಿ ಸ್ವಂತ ದುಡ್ಡಿನಲ್ಲಿ ಏಳು ಜೋಡಿಗಳು ಸಪ್ತಪದಿ ತುಳಿದಿದ್ದಾರೆ.
ವಿವಾಹ ನಿಶ್ಚಯವಾಗಿದ್ದ ಬಹುತೇಕ ಬಡ ವರ್ಗದ ವಧು-ವರರು ಮಲೆಮಹದೇಶ್ವರ ಬೆಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಅರ್ಜಿ ಸಲ್ಲಿಸಿದ್ದರು. ಆದರೆ, 2 ಬಾರಿ ವಿವಾಹ ಮುಂದೂಡಿಕೆಯಾಗಿದೆ. ಈ ಹಿನ್ನೆಲೆ ಚಾಮರಾಜನಗರದ ಜಗದೀಶ್-ನಂಜನಗೂಡಿನ ಕಾವ್ಯಶ್ರೀ, ಪಿ.ಜಿ ಪಾಳ್ಯದ ಮಹೇಶ್ ಕುಮಾರ್ ಮೈಸೂರಿನ ಹೊರಳವಾಡಿಯ ರಮ್ಯ, ತಾಳವಾಡಿಯ ಉದಯ ಕುಮಾರ್ ಇದೇ ಗ್ರಾಮದ ಸ್ನೇಹ, ನರಸೀಪುರದ ದಿನೇಶ್ ಮೈಸೂರಿನ ನಿರ್ಮಲ, ನಂಜನಗೂಡು ಹಳೇಪುರದ ಮಹೇಂದ್ರ ಚಾಮರಾಜನಗರದ ಅರಳೀಪುರ ಗ್ರಾಮದ ಮಂಗಳಮ್ಮ, ಮೈಸೂರಿನ ಸಂಜಯ್- ಸೌಭಾಗ್ಯ ಹಾಗೂ ಚಾಮರಾಜನಗರದ ರವಿ – ಸೌಮ್ಯ ಜೋಡಿ ಸಾಲೂರು ಬೃಹನ್ಮಠದಲ್ಲಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆದರೆ ಇತ್ತ ಸಚಿವರ ಸಮಯಕ್ಕಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರಾಧಿಕಾರ ಮುಂದೂಡಿಕೆ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.