ಸಾವಿನಲ್ಲೂ ಸಾರ್ಥಕತೆ! ಬಸ್ಸಿನಡಿ ಸಿಲುಕಿ ಸಾವನ್ನಪ್ಪಿದ ಕನಸು ಕಂಗಳ ಹುಡುಗನ ಕಣ್ಣು ದಾನ

Spread the love

ಸಾವಿನಲ್ಲೂ ಸಾರ್ಥಕತೆ! ಬಸ್ಸಿನಡಿ ಸಿಲುಕಿ ಸಾವನ್ನಪ್ಪಿದ ಕನಸು ಕಂಗಳ ಹುಡುಗನ ಕಣ್ಣು ದಾನ

ಕುಂದಾಪುರ: ಶನಿವಾರ ಬೆಳಿಗ್ಗೆ ಕಾಲೇಜಿಗೆ ತೆರಳುತ್ತಿದ್ದ ಸಂದರ್ಭ ಬಸ್ ಇಳಿಯುವಾಗ ಆಯತಪ್ಪಿ ಬಿದ್ದು ಬಸ್ಸಿನಡಿ ಸಿಲುಕಿ ಸಾವನ್ನಪ್ಪಿದ ಹೆಮ್ಮಾಡಿ‌ ಸಮೀಪದ ಕಟ್ ಬೇಲ್ತೂರಿನ ಕನಸು ಕಂಗಳ ಹುಡುಗ ಸುದೀಪ್ (20) ಅವರ ಕಣ್ಣುಗಳನ್ನು ದಾನ‌ ಮಾಡುವ ಮೂಲಕ ಪೋಷಕರು ಪುತ್ರನ ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಕಟ್ ಬೇಲ್ತೂರು ನಿವಾಸಿಗಳಾದ ನಾಗಪ್ಪ ಪೂಜಾರಿ ಜಲಜಾ ದಂಪತಿಗಳ ಪುತ್ರ ಸುದೀಪ್ ಪೂಜಾರಿ (20) ಎನ್ನುವರ ಕಣ್ಣುಗಳನ್ನು ದಾನ‌ ಮಾಡಲಾಗಿದೆ.

ಶನಿವಾರ ಬೆಳಿಗ್ಗೆ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದಾಗ ಹೆಮ್ಮಾಡಿ ಜಂಕ್ಷನ್ ಬಳಿ ಸುದೀಪ್ ಆಯತಪ್ಪಿ ಕೆಳಗೆ ಬಿದ್ದಿದ್ದರು. ಈ ವೇಳೆ ಬಸ್ಸಿನ ಮುಂಬದಿಯ ಚಕ್ರ ಸುದೀಪ್ ಸೊಂಟದ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗೊಂಡ ಪರಿಣಾಮ ಸಾವನ್ನಪ್ಪಿದ್ದರು.

ಬಸ್ ಅಪಘಾತದಲ್ಲಿ ಮೃತಪಟ್ಟ ಸುದೀಪ್ ಅವರ ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಿದ್ದು ನೇತ್ರ ತಜ್ಞೆ ಡಾ. ವಿಜಯಲಕ್ಷ್ಮಿ ಅವರು ನೇತ್ರದಾನದ ಮಹತ್ವದ ಬಗ್ಗೆ ಮೃತ ಸುದೀಪ್ ಪೂಜಾರಿ ಪೋಷಕರ ಬಳಿ ತಿಳಿಸಿದ್ದಾರೆ. ಇದಕ್ಕೆ ಪೋಷಕರು ಸಮ್ಮತಿ ಸೂಚಿಸಿದ ಹಿನ್ನೆಲೆ ಮಣಿಪಾಲದ ನುರಿತ ತಜ್ಞರ ತಂಡ ಆಸ್ಪತ್ರೆಗೆ ಆಗಮಿಸಿ ಪ್ರಕ್ರಿಯೆ ನಡೆಸಿದ್ದಾರೆ ಎಂದು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ತಿಳಿಸಿದ್ದಾರೆ.

ಹೆಮ್ಮಾಡಿ ಆಟೋ ಚಾಲಕರಿಗೆ ನಾಗರಿಕರ ಪ್ರಶಂಸೆ:
ಅಪಘಾತ ನಡೆದ‌‌ ಕ್ಷಣಾರ್ಧದಲ್ಲೇ ಕಾರ್ಯಪ್ರವೃತ್ತರಾದ ಹೆಮ್ಮಾಡಿಯ ಆಟೋ ಚಾಲಕ ಪ್ರವೀಣ್ ದೇವಾಡಿಗ ಮತ್ತವರ ಸ್ನೇಹಿತರು ಸುದೀಪ್ ಅವರನ್ನು ಬದುಕುಳಿಸಲು ಆಟೋ ರಿಕ್ಷಾದಲ್ಲೇ ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ‌ ಸುದೀಪ್ ಸಾವನ್ನಪ್ಪಿದ್ದಾರೆ‌ ಎಂದು ವೈದ್ಯರು ದೃಢಪಡಿಸಿದ್ದಾರೆ. ವಿದ್ಯಾರ್ಥಿ ಸುದೀಪ್ ಅವರನ್ನು ಉಳಿಸಿಕೊಳ್ಳಲು ರಿಕ್ಷಾ ಚಾಲಕರು ಮಾಡಿರುವ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ‌.

ಹೆಮ್ಮಾಡಿ ಆಟೋ ಚಾಲಕರು ಆಪತ್ಭಾಂಧವರು!
ಹೆಮ್ಮಾಡಿಯ ಆಸುಪಾಸಿನಲ್ಲಿ‌ ಎಲ್ಲೇ ಅಪಘಾತ ಸಂಭವಿಸಿದರೂ ಸ್ಥಳಕ್ಕೆ ಆಂಬುಲೆನ್ಸ್ ಬರುವ ಮೊದಲೇ ಹೆಮ್ಮಾಡಿಯ ಆಟೋ ಚಾಲಕರು ಘಟನೆ‌ ನಡೆದ ಸ್ಥಳಕ್ಕೆ ಬಂದು ಧೈರ್ಯ ಮಾಡಿ ಆಪತ್ಭಾಂಧವರಂತೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದನ್ನು ಇಲ್ಲಿ‌ ಸ್ಮರಿಸಬಹುದಾಗಿದೆ.


Spread the love