ಸಾಸ್ತಾನ ಸಂತ ಥೋಮಸ್‌ ಸೀರಿಯನ್‌ ಚರ್ಚ್‌ ಪವಿತ್ರೀಕರಣ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಅದ್ದೂರಿ ಹೊರೆಕಾಣಿಕೆ ಮೆರವಣಿಗೆ

Spread the love

ಸಾಸ್ತಾನ ಸಂತ ಥೋಮಸ್‌ ಸೀರಿಯನ್‌ ಚರ್ಚ್‌ ಪವಿತ್ರೀಕರಣ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಅದ್ದೂರಿ ಹೊರೆಕಾಣಿಕೆ ಮೆರವಣಿಗೆ

ಸಂತ ಥೋಮಸ್‌ ಸೀರಿಯನ್‌ ಓರ್ಥೊಡಕ್ಸ್‌ ಚರ್ಚಿನ ನವೀಕೃತ ಕಟ್ಟಡದ ಉದ್ಘಾಟನೆ ಮತ್ತು ಆಶೀರ್ವಚನದ ಪ್ರಯುಕ್ತ ಭಾನುವಾರ ಅಭೂತಪೂರ್ವ ಹೊರೆಕಾಣಿಕೆ ಮೆರವಣಿಗೆ ಜರುಗಿತು.

ಮಾಬುಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿಯ 66 ರ ಮೂಲಕ ಚರ್ಚಿಗೆ ತಲುಪಿತು.

ಕೃಷಿಕರು ಬೆಳೆದ ವಸ್ತುಗಳನ್ನು ಪ್ರಥಮವಾಗಿ ದೇವರಿಗೆ ಸಮರ್ಪಿಸುವಂತೆ ನಾನಾ ಭಾಗದಿಂದ ಹಸಿರು ಹೊರೆ ಕಾಣಿಕೆಯಲ್ಲಿ ಹಣ್ಣು, ತರಕಾರಿ, ತೆಂಗಿನಕಾಯಿ ಸೇರಿದಂತೆ ಹಲವಾರು ವಸ್ತುಗಳನ್ನು ವಾಹನ ಜಾಥಾದ ಮೂಲಕ ಚರ್ಚಿಗೆ ಕೊಂಡೊಯ್ಯಲಾಯಿತು.

ಸಾಂಪ್ರದಾಯಿಕ ಭಾರತೀಯ ಉಡುಗೆ ತೊಟ್ಟ ಪುರುಷರು ಮತ್ತು ಮಹಿಳೆಯರು ಬ್ಯಾಂಡ್‌ ವಾದ್ಯದ ಮೂಲಕ ಸುಮಾರು 3 ಕಿಮೀ ದೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬಂತು.

ಮೆರವಣಿಗೆಯಲ್ಲಿ ಕಂಬಳದ ಕೋಣ, ಚಂಡೆ ವಾದನದ ಜೊತೆ ಯುವತಿಯೋರ್ವರು ಕೃಷಿ ಸಂಸ್ಕೃತಿಯನ್ನು ಬಿಂಬಿಸಲು ಚಿಕ್ಕ ಟ್ರ್ಯಾಕ್ಟರ್‌ ಒಂದನ್ನು ಚಲಾಯಿಸಿಕೊಂಡು ಬಂದು ಸಾರ್ವಜನಿಕರ ಗಮನ ಸೆಳೆದರು.

ಸಾಸ್ತಾನ ಚರ್ಚಿನ ಧರ್ಮಗುರು ವಂ|ನೊಯೆಲ್‌ ಲೂಯಿಸ್‌ ಮತ್ತು ಬ್ರಹ್ಮಾವರ ಸೀರಿಯನ್ ಧರ್ಮಪ್ರಾಂತ್ಯದ ವ್ಯಾಪ್ತಿಯ ನಾನಾ ಭಾಗದ ಧರ್ಮಗುರುಗಳು ಹೊರೆಕಾಣಿಕೆ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಜೀರ್ಣೊದ್ಧಾರ ಸಮಿತಿಯ ಅಧ್ಯಕ್ಷರಾದ ಮೊಸೇಸ್‌ ರೊಡ್ರಿಗಸ್‌, ಕಾರ್ಯದರ್ಶಿ ರೋಬರ್ಟ್‌ ರೊಡ್ರಿಗಸ್‌, ಖಜಾಂಚಿ ಜೆರಾಲ್ಡ್‌ ರೊಡ್ರಿಗಸ್‌, ಟ್ರಸ್ಟಿಗಳಾದ ಲಾರೆನ್ಸ್‌ ಅಲ್ಮೇಡಾ, ಮಿಲ್ಟನ್‌ ಆಲ್ಮೇಡಾ ಹಾಗೂ ಇತರರು ಉಪಸ್ಥಿತರಿದ್ದರು.

ಭಾರತದ ಪ್ರಾಚೀನ ಪರಂಪರೆಯ ಓರ್ಥೋಡೋಕ್ಸ್ ಸಿರಿಯನ್ ಇಗರ್ಜಿಯಾದ ಸಾಸ್ತಾನ ಸೈಂಟ್ ಥೋಮಸ್ ಇಗರ್ಜಿ ಇದೀಗ ನವೀಕೃತಗೊಂಡು ಪವಿತ್ರೀಕರಣ ಹಾಗೂ ಉದ್ಘಾಟನಾ ಸಮಾರಂಭ ಮೇ 17 ಮತ್ತು 18 ರಂದು ಜರುಗಲಿದೆ. ಪವಿತ್ರೀಕರಣ ಹಾಗೂ ಉದ್ಘಾಟನಾ ಸಮಾರಂಭ ಮಲಂಕರ ಓರ್ಥೋ ಡೋಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷರಾಗಿರುವ ಪೂರ್ವದ ಕೆಥೊಲಿಕೋಸ್ ಹಾಗೂ ಮಲಂಕರ ಮೆಟ್ರೋಪಾಲಿಟಿನ್, ಪರಮ ಪೂಜ್ಯ ಬಸಲಿಯೋಸ್ ಮಾರ್ಥೋಮ ಮ್ಯಾಥ್ಯೂಸ್ ತೃತೀಯ, ಮತ್ತು ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಹಾಗೂ ಇತರ ಧರ್ಮಾಧ್ಯಕ್ಷರ ಉಪಸ್ಥಿತಿಯಲ್ಲಿ ನಾನಾ ಧಾರ್ಮಿಕ ವಿಧಿಯೊಂದಿಗೆ ಜರುಗಲಿದೆ.


Spread the love