ಸಾಹುಕಾರ್ ಚನ್ನಯ್ಯ ಮುಖ್ಯ ನಾಲೆ ಪರಿಶೀಲನೆ

Spread the love

ಸಾಹುಕಾರ್ ಚನ್ನಯ್ಯ ಮುಖ್ಯ ನಾಲೆ ಪರಿಶೀಲನೆ

ಕೃಷ್ಣರಾಜಪೇಟೆ: ಹೇಮಾವತಿ ಜಲಾಶಯ ಯೋಜನೆಯ ಸಾಹುಕಾರ್ ಚನ್ನಯ್ಯ ಮುಖ್ಯ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಲೋಕಾಯುಕ್ತ ಇಲಾಖೆಯ ಮುಖ್ಯ ಇಂಜಿನಿಯರ್ ಸೇರಿದಂತೆ ಗುಣಮಟ್ಟ ತಜ್ಞರ ತಂಡವು ನಾಲೆಗಳ ಮೇಲೆ ಸಂಚರಿಸಿ ಪರಿಶೀಲನೆ ನಡೆಸಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲೂಕಿನ ವಿವಿಧ ಭಾಗಗಳಿಗೆ ನೀರುಣಿಸುವ ಸಾಹುಕಾರ್ ಚನ್ನಯ್ಯ ಮುಖ್ಯ ನಾಲೆಯನ್ನು 813 ಕೋಟಿ ರೂ ವೆಚ್ಚದಲ್ಲಿ ಆಧುನೀಕರಣದ ಕಾಮಗಾರಿಯನ್ನು ನಡೆಸಲಾಗಿತ್ತು. ಆದರೆ ಇದರಲ್ಲಿ ನೂರಾರು ಕೋಟಿ ರೂಪಾಯಿ ದುರುಪಯೋಗವಾಗಿದ್ದು, ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪವನ್ನು ತಾಲೂಕು ರೈತ ಸಂಘದ ಕಾರ್ಯಕರ್ತರು ಮಾಡಿದ್ದರು.

ಅಲ್ಲದೆ, ಭ್ರಷ್ಟಾಚಾರ ನಿಗ್ರಹ ದಳ, ಲೋಕಾಯುಕ್ತ ಕಛೇರಿ, ನೀರಾವರಿ ಸಚಿವರು, ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರಿಗೂ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದರು. ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಇಲಾಖೆಯ ಮುಖ್ಯ ಇಂಜಿನಿಯರ್ ಸೇರಿದಂತೆ ಗುಣಮಟ್ಟ ತಜ್ಞರ ತಂಡವು ನಾಲೆಗಳ ಮೇಲೆ ಸಂಚರಿಸಿ ಪರಿಶೀಲನೆ ನಡೆಸಿದೆ.

ಕರ್ನಾಟಕ ಲೋಕಾಯುಕ್ತ ಇಲಾಖೆಯ ಮುಖ್ಯ ಇಂಜಿನಿಯರ್ ಪ್ರಸಾದ್ ಮತ್ತು ನಿರಂಜನ್ ನೇತೃತ್ವದ ಅಧಿಕಾರಿಗಳ ತಂಡವು ಕೆ.ಆರ್.ಪೇಟೆ ತಾಲೂಕಿನ 52ನೇ ಸರಪಳಿಯಿಂದ ನಾಲೆಗಳ ಮೇಲೆ ಸಂಚರಿಸಿ ಚಟ್ಟಂಗೆರೆ ಸುರಂಗ ಮಾರ್ಗವಾಗಿ ನಾಲಾ ಏರಿಯ ಮೇಲೆ ಅಲ್ಲಲ್ಲಿ ಕಾಲುವೆಯೊಳಕ್ಕೆ ಇಳಿದು ಡ್ರಿಲ್ಲಿಂಗ್ ಯಂತ್ರದಿಂದ ಕಾಮಗಾರಿಯನ್ನು ಲೈನಿಂಗ್ ಡ್ರಿಲ್ಲಿಂಗ್ ಮೂಲಕ ಅಳತೆ ಮಾಡಿ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲನೆ ನಡೆಸಿತು.

ಕೃಷ್ಣರಾಜಪೇಟೆ ತಾಲೂಕಿನುದ್ದಕ್ಕೂ ಸಂಚರಿಸಿದ ಲೋಕಾಯುಕ್ತ ತಂಡಕ್ಕೆ ಕಿತ್ತು ಹೋಗುತ್ತಿರುವ ಲೈನಿಂಗ್, ರ್‍ಯಾಂಪ್‌ಗಳು, ಸೋಪಾನಕಟ್ಟೆಗಳು, ಕಿತ್ತು ಹೋಗುತ್ತಿರುವ ಸೇತುವೆಗಳು, ತಡೆಗೋಡೆಯಿಲ್ಲದ ಸೇತುವೆ ಮತ್ತು ಕಾಲುವೆ ಏರಿಗಳು, ಅಳವಡಿಕೆಯಾಗದ ಗಡಿ ಕಲ್ಲುಗಳು ಮತ್ತಿತರ ಲೋಪಗಳು ಕಂಡುಬಂದವು. ಕಳಪೆ ಲೈನಿಂಗ್ ಕಾಮಗಾರಿ ಮತ್ತಿತರ ಸ್ಯಾಂಪಲ್‌ಗಳನ್ನು ಲೋಕಾಯುಕ್ತರ ತಂಡ ಹೆಚ್ಚಿನ ತನಿಖೆಗೆ ತನ್ನ ವಶಕ್ಕೆ ತೆಗದುಕೊಂಡಿತು. ಕಾಲುವೆ ಏರಿಯ ಮೇಲೆ ಗ್ರಾವಲ್ ಹಾಕಿದ್ದೇವೆಂದು ಸುಮಾರು 28 ಕೋಟಿ ಬಿಲ್ಲನ್ನು ಬರೆಯಲಾಗಿದೆ. ಆದರೆ ಗ್ರಾವಲ್ ಹಾಕದ ಪರಿಣಾಮ ಕಾಲುವೆ ಏರಿಯ ಮೇಲಿನ ರಸ್ತೆಯು ಸಂಚರಿಸಲಾರದಷ್ಟು ಹಾಳಾಗಿದ್ದು ಲೋಕಾಯುಕ್ತರ ತಂಡದ ವಾಹನಗಳು ಸಂಚರಿಸಲಾರದೆ ಹಿಂತಿರುಗಿ ಪರ್ಯಾಯ ಮಾರ್ಗದ ಮೂಲಕ ಕಾಲುವೆ ಏರಿ ಪ್ರವೇಶಿಸಬೇಕಾಯಿತು. 113 ಕಿ.ಮೀ ವ್ಯಾಪ್ತಿಯಲ್ಲಿ ಕಾಲುವೆ ಏರಿ ಸಂಪೂರ್ಣವಾಗಿ ಅಲ್ಲಲ್ಲಿ ಗುಂಡಿ ಬಿದ್ದಿದ್ದು ಲೋಕಾಯುಕ್ತ ತಂಡಕ್ಕೆ ಕಂಡು ಬಂದಿತು.


Spread the love