ಸಿಎಂ ಆಗಲು ಬಸವರಾಜ ಬೊಮ್ಮಾಯಿ ಎಷ್ಟು ಹಣ ಕೊಟ್ಟಿದ್ದಾರೆ? ರಣದೀಪ್ ಸಿಂಗ್ ಸುರ್ಜೇವಾಲಾ

Spread the love

ಸಿಎಂ ಆಗಲು ಬಸವರಾಜ ಬೊಮ್ಮಾಯಿ ಎಷ್ಟು ಹಣ ಕೊಟ್ಟಿದ್ದಾರೆ? ರಣದೀಪ್ ಸಿಂಗ್ ಸುರ್ಜೇವಾಲಾ

ಉಡುಪಿ: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದರೂ, ಎಂಟು ಬಾರಿ ರಾಜ್ಯಕ್ಕೆ ಬಂದ ಪ್ರಧಾನಿ ಮೋದಿ ತುಟಿ ಬಿಚ್ಚದಿರುವುದು ನೋಡುವಾಗ ಡಬಲ್ ಎಂಜಿನ್ ಅಲ್ಲ, ಡಬಲ್ ಕರಪ್ಶನ್ ಸರಕಾರ ಎಂದು ಸಾಬೀತಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ. ಇದೇವೇಳೆ ಸಿಎಂ ಆಗಲು ಬಸವರಾಜ ಬೊಮ್ಮಾಯಿ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಮೋದಿ, ನಡ್ಡಾ ಉತ್ತರಿಸಲಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸವಾಲು ಹಾಕಿದ್ದಾರೆ.

ಅವರು ಶುಕ್ರವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದರು.

‘ಬಸವರಾಜ ಬೊಮ್ಮಾಯಿ ದೇಶದ ಎಲ್ಲಿಗೆ ಹೋದರೂ ಅವರನ್ನು ಪೇಸಿಎಂ ಎಂದು, ಬಿಜೆಪಿ ಸರ್ಕಾರವನ್ನು ಶೇ 40ರಷ್ಟು ಕಮಿಷನ್ ಪಡೆಯುವ ಸರ್ಕಾರ ವೆಂದೂ ಕರೆಯುತ್ತಾರೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಅರೋಪವಲ್ಲ. 50 ಸಾವಿರ ಗುತ್ತಿಗೆದಾರರನ್ನು ಸದಸ್ಯರ ನ್ನಾಗಿ ಹೊಂದಿರುವ ರಾಜ್ಯ ಗುತ್ತಿಗೆ ದಾರರ ಸಂಘದ ಅಧ್ಯಕ್ಷರ ಲಿಖಿತ ಆರೋಪ. ಈ ಆರೋಪ ಬಂದ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ 8 ಬಾರಿ ಬಂದರೂ ಪ್ರತಿಕ್ರಿಯಿಸಿಲ್ಲವೇಕೆ’ ಎಂದೂ ಪ್ರಶ್ನಿಸಿದರು.

ತಮ್ಮದೇ ಪಕ್ಷದ ಮುಖಂಡ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರನ್ನೇ ಲೂಟಿ ಮಾಡಿದ ಬಿಜೆಪಿಯವರು ಇನ್ನು ರಾಜ್ಯವನ್ನು ದೋಚದೇ ಬಿಡುತ್ತಾರಾ? ಇಂಥ ಸರಕಾರಕ್ಕೆ ಮುಂದುವರಿಯುವ ನೈತಿಕತೆ ಇದೆಯೇ ಎಂದು ಅವರು ಪ್ರಶ್ನಿಸಿದರು.

ಬೊಮ್ಮಾಯಿ ನೇತೃತ್ವದ ಸರಕಾರದ 40 ಪರ್ಸೆಂಟ್ ಭ್ರಷ್ಟಾಚಾರ ಕುರಿತು ಇಡೀ ದೇಶ ಮಾತನಾಡುತ್ತಿದೆ. ಬಿಜೆಪಿ ಮುಖಂಡ ಸಂತೋಷ್ ಪಾಟೀಲ್ ಶೇ.40 ಲಂಚ ಕೊಡಲಾಗದೇ ಆತ್ಮಹತ್ಯೆ ಮಾಡಿಕೊಂಡರು. ಇನ್ನೊಬ್ಬ ಗುತ್ತಿಗೆದಾರ, ಒಬ್ಬ ಇನ್ಸ್ಪೆಕ್ಟರ್ ಸಹಿತ ಹಲವರು ಲಂಚ ಕೊಡಲಾಗದೆ ಸಾವಿಗೆ ಶರಣಾದರು. ನಿಮಗೆಷ್ಟು ಲಂಚ ಬೇಕು ? ನಾವು ಸಂಗ್ರಹಿಸಿ ಕೊಡ್ತೀವಿ. ಆದರೆ, ಅನ್ಯಾಯವಾಗಿ ಮೃತಪಟ್ಟವರನ್ನು ವಾಪಸ್ ತರಲು ನಿಮ್ಮಿಂದ ಸಾಧ್ಯನಾ ಎಂದು ಅವರು ಪ್ರಶ್ನಿಸಿದರು.

ಬಿಜೆಪಿಯ ಎಂಟು ಮಂದಿ ಸಚಿವರು, 17 ಶಾಸಕರ 40 ಪರ್ಸೆಂಟ್ ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ, ಶೇ.30 ಲಂಚ ಕೇಳಿದ ಬಗ್ಗೆ ಗದಗದ ಸ್ವಾಮೀಜಿ ಅಲ್ಲದೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ಕೂಡಾ ಆರೋಪ ಮಾಡಿತು. ಬಿಜೆಪಿ ಶಾಸಕ ಯತ್ನಾಳ್ ಕೂಡಾ ಸಿಎಂ ಸ್ಥಾನ ಎರಡು ಸಾವಿರ ಕೋಟಿ ರೂ.ಗೆ ಮಾರಾಟವಾಗಿದೆ ಎಂದು ಆರೋಪ ಮಾಡಿದ್ದರು. ಸಿಎಂ ಆಗಲು ಬೊಮ್ಮಾಯಿ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಮೋದಿ, ನಡ್ಡಾ ಉತ್ತರಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಘೋಷಿಸಿರುವ ಎರಡು ಸಾವಿರ ರೂ., 200 ಯೂನಿಟ್ ವಿದ್ಯುತ್ ಮತ್ತು 10 ಕೆಜಿ ಅಕ್ಕಿಯಿಂದ ಗ್ಯಾರಂಟಿಯಿಂದ ಹಣ ಎಲ್ಲಿಂದ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ರಾಜ್ಯದ ಬಜೆಟ್ 3.10 ಲಕ್ಷ ಕೋಟಿ ರೂ. ಇದರಲ್ಲಿ ಬಿಜೆಪಿ ಸರಕಾರ 40 ಪರ್ಸೆಂಟ್ ಕಮಿಷನ್ ಮೊತ್ತ 1.22 ಲಕ್ಷ ರೂ. ಪಡೆಯುತ್ತದೆ. ಕಾಂಗ್ರೆಸ್ನ ಮೂರೂ ಭರವಸೆಗಳ ಒಟ್ಟು ಮೊತ್ತ 30 ಸಾವಿರ ಕೋಟಿ ರೂ. ಮಾತ್ರ. ಇನ್ನೂ 90 ಸಾವಿರ ಕೋಟಿ ರೂ. ಉಳಿತಾಯವಾಗಲಿದೆ. ಅವರ ಲಂಚದ ಹಣದಲ್ಲೇ ಇನ್ನಷ್ಟು ಯೋಜನೆ ಜಾರಿಗೆ ತರಬಹುದು ಎಂದು ಅವರು ಲೆಕ್ಕಾಚಾರ ಕೊಟ್ಟರು.

ಮುಂದಿನ 2 ತಿಂಗಳ ಕಾಲ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದರೆ ರಾಜ್ಯಕ್ಕೆ ಶಾಪ ಎನಿಸಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬಹುದು. ರಾಜ್ಯದ ಚಿತ್ರಣವನ್ನೇ ಬದಲಿಸಬಹುದು. ‘ಇದರ ಜತೆಗೆ, ಕಾಂಗ್ರೆಸ್ ಅಧಿಕಾ ರಕ್ಕೆ ಬಂದರೆ ಶೇ 1ರಷ್ಟೂ ಕಮಿಷನ್ ಪಡೆಯುವುದಿಲ್ಲ. ಈಗ ಇರುವ ಶೇ 40ರಷ್ಟು ಕಮಿಷನ್ ಪಡೆಯುವ ಆರೋಪ ಹೊತ್ತ ಸರ್ಕಾರ ವನ್ನು ತೆಗೆಯಬೇಕಾದರೆ ಕಾರ್ಯ ಕರ್ತರು ಒಂದು ವಾರದಲ್ಲಿ ಪ್ರತಿ ಮನೆಗೂ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಬೇಕು’ ಎಂಬ ಗುರಿಯನ್ನೂ ನೀಡಿದರು.

‘ಸಿದ್ದರಾಮಯ್ಯ ಅವರನ್ನು ಕೊಲ್ಲಿ ಎಂದು ಬಿಜೆಪಿಯವರು ಹೇಳುತ್ತಾರೆ’ ಎಂದು ಹೇಳುತ್ತಲೇ ಸುರ್ಜೇವಾಲ ಅವರು ಕಾಂಗ್ರೆಸ್ನಲ್ಲಿ ಕೊಲೆಯಾದ ನಾಯಕರ ಹೆಸರುಗಳನ್ನು ಪ್ರಸ್ತಾಪಿಸಿ ‘ಇವರೆಲ್ಲ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅದರಂತೆ ಈಗ ಸಿದ್ದರಾಮಯ್ಯ ಅವರನ್ನೂ ಕೊಲ್ಲಿ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ, ಯಾರನ್ನೇ ಕೊಂದರೂ ಕಾಂಗ್ರೆಸ್ ಉಳಿದೇ ಉಳಿಯುತ್ತದೆ’ ಎಂದು ಪ್ರತಿಪಾದಿಸಿದರು.

ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ನಾಯಕರಾದ ಅಶೋಕ್ ಕುಮಾರ್ ಕೊಡವೂರು, ಮಧು ಬಂಗಾರಪ್ಪ, ಎಮ್ ಎ ಗಫೂರ್, ಮಮತಾ ಗಟ್ಟಿ, ಗೀತಾ ವಾಗ್ಳೆ, ರಮೇಶ್ ಕಾಂಚನ್, ಹರೀಶ್ ಕಿಣಿ, ಶ್ಯಾಮಲಾ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here