
ಸಿಎಂ ಬೊಮ್ಮಾಯಿ ಅವರ ಮಳೆ ಹಾನಿಯ ವೀಕ್ಷಣೆ ಕೇವಲ ಕಾಟಾಚಾರದ್ದು – ಹಮ್ಮದ್ ಉಡುಪಿ
ಉಡುಪಿ: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜಿಲ್ಲೆಯಲ್ಲಿ ಮಳೆ ಹಾನಿಯ ಕುರಿತು ವೀಕ್ಷಣೆ ನಡೆಸಿದ್ದು ಕೇವಲ ಕಾಟಚಾರದ್ದು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಹಮ್ಮದ್ ಉಡುಪಿ ಟೀಕಿಸಿದ್ದಾರೆ.
ಜಿಲ್ಲೆಯಲ್ಲಿ ಸತತ 10 ದಿನಗಳಿಂದ ಧಾರಾಕಾರ ಮಳೆಯಾಗಿ ಪ್ರವಾಹ ಪರಿಸ್ಥಿತಿಯಿಂದಾಗಿ ಹಲವು ಮನೆಗಳಿಗೆ ನೆರೆ ನೀರು ನುಗ್ಗಿ ಸಮಸ್ಯೆಗಳಾಗಿದ್ದು ಸಾವಿರಾರು ಮಂದಿ ನದಿ ತಟದ ನಿವಾಸಿಗಳು ಆತಂಕದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಮಳೆಯಿಂದಾಗಿ ಸಮುದ್ರ ಕೊರೆತದಿಂದಾಗ ಹಲವಾರು ತೆಂಗಿನ ಮರಗಳು, ಸಮುದ್ರಕ್ಕೆ ಆಹುತಿಯಾಗಿದ್ದು, ಮನೆಗಳು ಅಪಾಯದಲ್ಲಿವೆ. ಪ್ರವಾಹದಿಂದ ಭತ್ತ ಕೃಷಿ ಸಂಪೂರ್ಣವಾಗಿ ನಾಶವಾಗಿದೆ.
ಪ್ರವಾಹ ಮತ್ತು ಮಳೆಹಾನಿಯ ವೀಕ್ಷಣೆ ಮಾಡುವುದಾಗಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಪ್ರಚಾರ ಗಿಟ್ಟಿಸಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಪ್ರವಾಸವನ್ನು ಕೇವಲ ಎರಡು ಗಂಟೆಯ ಸಭೆ ನಡೆಸಿದ್ದು, ಮತ್ತು ಮರವಂತೆಯ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ್ದು ಬಿಟ್ಟರೆ ಬೇರೆ ಎಲ್ಲಿ ಕೂಡ ನಷ್ಟವಾದುದ್ದನ್ನು ಪರಿಶೀಲನೆ ನಡೆಸದೆ ವಾಪಾಸಾಗಿರುವುದು ಖಂಡನೀಯ.
ಉಡುಪಿಯ ಬನ್ನಂಜೆ, ಕಲ್ಸಂಕ, ಹೇರೂರು, ಉಪ್ಪೂರು, ನೀಲಾವರ ಪ್ರದೇಶದಲ್ಲಿ ಭಾರಿ ಪ್ರಮಾಣದ ನೆರೆಯಿಂದ ಕೃಷಿ ಭೂಮಿ ಹಾನಿಯಾಗಿದ್ದು ಕನಿಷ್ಠ ಭೇಟಿ ನೀಡಿ ಸಮಸ್ಯೆಗೊಳಗಾದ ಜನರ ನೋವನ್ನು ಆಲಿಸುವ ಪ್ರಯತ್ನ ಕೂಡ ನಡೆಸದಿರುವುದು ಜನರ ಕುರಿತು ಮುಖ್ಯಮಂತ್ರಿಗಳಿಗೆ ಇರುವ ನೈಜ ಕಾಳಜಿ ಏನು ಎನ್ನುವುದು ತೋರಿಸುತ್ತದೆ.
ಮಳೆಯಿಂದಾಗಿ ಜಿಲ್ಲೆಯಲ್ಲಿ ಈಗಾಗಲೇ 50 ಕೋಟಿಗೂ ರೂಪಾಯಿ ಹಾನಿಯಾಗಿದ್ದು ಮುಖ್ಯಮಂತ್ರಿಗಳ ಭೇಟಿಯ ವೇಳೆ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆಯ ನಿರೀಕ್ಷೆ ಕೂಡ ಹುಸಿಯಾಗಿದೆ. ಮಳೆಯಿಂದಾಗಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ರಸ್ತೆಗಳು ಸಂಪೂರ್ಣ ಹೊಂಡಮಯವಾಗಿದ್ದು ಅದಕ್ಕೆ ಕೂಡ ಯಾವುದೇ ರೀತಿಯ ಪರಿಹಾರವನ್ನು ಮುಖ್ಯಮಂತ್ರಿಗಳು ತಿಳಿಸದೇ ಇರುವುದು ಅವರ ಭೇಟಿ ಕೇವಲ ಕಾಟಚಾರದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.