
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಬಹುತೇಕ ಪಕ್ಕಾ, ಘೋಷಣೆ ಮಾತ್ರ ಬಾಕಿ!
ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಬಹುತೇಕ ಪಕ್ಕಾ ಆಗಿದ್ದು, ಕಾಂಗ್ರೆಸ್ ಹೈಕಮಾಂಡ್ನಿಂದ ಅಧಿಕೃತ ಘೋಷಣೆ ಬಾಕಿ ಇದೆ ಎನ್ನಲಾಗಿದೆ.
ರಾಹುಲ್ ಗಾಂಧಿ ಭೇಟಿ ಬಳಿಕ ಅಧಿಕೃತ ಘೋಷಣೆ ಮಾಡಲಿದ್ದು ರಾಹುಲ್ ಗಾಂಧಿಯವರು ಸಿದ್ದರಾಮಯ್ಯ, ಡಿಕೆಶಿ ಜತೆ ಮಾತುಕತೆ ನಡೆಸಿ ಚರ್ಚೆ ಬಳಿಕ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಸಿದ್ದರಾಮಯ್ಯ ನಿವಾಸದ ಮುಂದೆ ಹೆಚ್ಚಿದ ಪೊಲೀಸ್ ಭದ್ರತೆ
ಈ ನಡುವೆ ಸಿದ್ದರಾಮಯ್ಯ ಅಭಿಮಾನಿಗಳು ನಿವಾಸದ ಬಳಿ ಬರುವ ಮುನ್ಸೂಚನೆ ಹಿನ್ನಲೆ ಭದ್ರತೆ ಹೆಚ್ಚಿಸಲಾಗಿದೆ. ಒಂದು ಕೆಎಸ್ಆರ್ಪಿ ವ್ಯಾನ್, 70 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕುಮಾರಕೃಪಾ ಬಳಿ ಇರುವ ಸಿದ್ದು ಸರ್ಕಾರಿ ನಿವಾಸದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಹೈಕಮಾಂಡ್ನಿಂದ ಸಿದ್ದರಾಮಯ್ಯ, ಡಿಕೆಶಿಗೆ ಎಚ್ಚರಿಕೆ ಸಂದೇಶ
ಕಾಂಗ್ರೆಸ್ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸುವ ಸಾಧ್ಯತೆ ಇದೆಯಂದು ಸುರ್ಜೇವಾಲ ಜತೆ ಸಿದ್ದರಾಮಯ್ಯ ಚರ್ಚೆ ವೇಳೆ ವಿಚಾರ ಪ್ರಸ್ತಾಪ ಮಾಡಲಾಗಿದೆ. ಹೀಗಾಗಿ ರಣದೀಪ್ ಸುರ್ಜೇವಾಲ ಬೀದರ್ನಿಂದ ಚಾಮರಾಜನಗರವರೆಗೂ ಶಾಸಕರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈಗಾಗಲೇ ಅನೇಕ ಶಾಸಕರನ್ನು ಬಿಜೆಪಿ ಸಂಪರ್ಕಿಸಿರುವ ಮಾಹಿತಿ ಸಿಕ್ಕಿದ್ದು ನಾವು ಮೈಮರೆತರೆ ಯಾವುದೇ ಸಮಸ್ಯೆ ಎದುರಾಗಬಹುದು ಎಂದು ಸಿದ್ದರಾಮಯ್ಯ, ಡಿಕೆಶಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಎಚ್ಚರಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ಗೆ ಉಪಮುಖ್ಯಮಂತ್ರಿ ಸ್ಥಾನ ಸಾಧ್ಯತೆ
ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ, ಡಿಕೆ ಶಿವಕುಮಾರ್ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ. ಅಧ್ಯಕ್ಷ ಹುದ್ದೆ ಜೊತೆ ಎರಡು ಪ್ರಮುಖ ಖಾತೆಗಳಿಗೆ ಡಿಕೆಶಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಇಂಧನ ಮತ್ತು ನೀರಾವರಿ ಮೇಲೆ ಡಿಕೆ ಶಿವಕುಮಾರ್ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.