ಸಿಎ ಪರೀಕ್ಷೆಯಲ್ಲಿ ದೇಶಕ್ಕೆ 29ನೇ ಸ್ಥಾನ ಪಡೆದ ವೈಷ್ಣವಿಗೆ ಸನ್ಮಾನ

Spread the love

ಸಿಎ ಪರೀಕ್ಷೆಯಲ್ಲಿ ದೇಶಕ್ಕೆ 29ನೇ ಸ್ಥಾನ ಪಡೆದ ವೈಷ್ಣವಿಗೆ ಸನ್ಮಾನ

ಕುಂದಾಪುರ: ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿಎ/ಸಿಎಸ್/ ಸಿಎಂಎ ಹಾಗೂ ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವತಿಯಿಂದ ಇನ್ಸ್‍ಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ದೇಶಕ್ಕೆ 21ನೇ ರ್ಯಾಂಕ್ ಹಾಗೂ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ದೇಶಕ್ಕೆ 29 ನೇ ರ್ಯಾಂಕ್ ಗಳಿಸಿದ ಸಂಸ್ಥೆಯ ವಿದ್ಯಾರ್ಥಿನಿ ವೈಷ್ಣವಿ ಎಂ.ವಿ. ಅವರನ್ನು ಸಮ್ಮಾನಿಸಲಾಯಿತು.


ಅತ್ಯಂತ ಕಠಿಣ ಪಠ್ಯಕ್ರಮ ಪರೀಕ್ಷೆಯಲ್ಲೊಂದಾದ ಸಿಎ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯಾದ ವೈಷ್ಣವಿ ಸತತ ಎರಡು ಪರೀಕ್ಷೆಯಲ್ಲಿ ಎರಡು ರ್ಯಾಂಕ್ ಗಳಿಸಿದ್ದು, ಇವರ ಸಾಧನೆಯನ್ನು ಮೆಚ್ಚಿ ಶಿಕ್ಷ ಪ್ರಭ ಸಂಸ್ಥೆಯ ವತಿಯಿಂದ 50 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವೈಷ್ಣವಿ ಎಂ.ವಿ.ಅವರು, 8 ನೇ ತರಗತಿಯಿಂದಲೇ ನನಗೆ ಲೆಕ್ಕ ಪರಿಶೋಧಕರಾಗಬೇಕು ಎನ್ನುವ ಕನಸು ಕಂಡಿದ್ದು, ತಾಯಿಯೇ ಇದಕ್ಕೆ ಪ್ರೇರಣೆ. ಸಿಎ ಕೋರ್ಸ್ ಕಠಿನ ಎಂದು ಗ್ರಾಮೀಣ ವಿದ್ಯಾರ್ಥಿಗಳು ಹಿಂಜರಿಯುವುದು ಸರಿಯಲ್ಲ. ಆಸಕ್ತಿ, ಸತತ ಪ್ರಯತ್ನವಿದ್ದರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ. ಹಿಂದೆ ಈ ಕೋರ್ಸ್ ಮಾಡಬೇಕಾದರೆ ಉಡುಪಿ, ಮಂಗಳೂರು, ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ ಈಗ ಶಿಕ್ಷ ಪ್ರಭದಿಂದಾಗಿ ಕುಂದಾಪುರದಲ್ಲೇ ಉತ್ತಮ ಅವಕಾಶ ಸಿಕ್ಕಿದೆ. ನನ್ನ ಈ ಸಾಧನೆಯ ಹಿಂದೆ ತಂದೆ, ತಾಯಿ, ಶಿಕ್ಷಕರ ಸಹಕಾರ ಹಾಗೂ ಶಿಕ್ಷ ಪ್ರಭ ಸಂಸ್ಥೆಯ ಪಾತ್ರ ಮಹತ್ತರವಾದುದು ಎಂದವರು ಹೇಳಿದರು.

ಇಲ್ಲಿನ ಮದ್ದುಗುಡ್ಡೆಯ ವಾಸುದೇವ ಪೂಜಾರಿ ಹಾಗೂ ಶಾಂತ ದಂಪತಿಯ ಪುತ್ರಿ ವೈಷ್ಣವಿ ಎಂ.ವಿ. ಅವರು ಪ್ರಸ್ತುತ ಭಂಡಾರ್‍ಕಾರ್ಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರತಾಪ್‍ಚಂದ್ರ ಶೆಟ್ಟಿ ಹಾಗೂ ಭರತ್ ಶೆಟ್ಟಿ ಮಾತನಾಡಿ, ವೈಷ್ಣವಿ ಸಾಧನೆ ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ. ದೇಶದ ಒಟ್ಟಾರೆ ಸಿಎ ಇಂಟರ್‍ಮೀಡಿಯೇಟ್ ಹಾಗೂ ಸಿಎ ಫೌಂಡೇಶನ್ ಫಲಿತಾಂಶಕ್ಕೆ ಹೋಲಿಸಿದರೆ ನಮ್ಮ ಸಂಸ್ಥೆಯ ಸಾಧನೆ ಕೊರೊನಾ ಕಾಲದಲ್ಲೂ ಶ್ರೇಷ್ಠವಾದುದು. ಪ್ರಥಮ ಪ್ರಯತ್ನದಲ್ಲೇ ಸಿಎ ಫೌಂಡೇಶನ್‍ನ 41 ವಿದ್ಯಾರ್ಥಿಗಳು ಹಾಗೂ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ 15 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿಕ್ಷ ಪ್ರಭಾ ಅಕಾಡೆಮಿಯ ಅಂಗ ಸಂಸ್ಥೆ ಸುಜ್ಞಾನ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ ಇದ್ದರು.


Spread the love