ಸಿಗರೇಟಿನಿಂದ ಸುಟ್ಟು ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ – ಆರೋಪಿ ಪತಿ ಸೆರೆ 

Spread the love

ಸಿಗರೇಟಿನಿಂದ ಸುಟ್ಟು ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ – ಆರೋಪಿ ಪತಿ ಸೆರೆ 

ಕುಂದಾಪುರ: ವರದಕ್ಷಿಣೆ ಕಿರುಕುಳ ಸಂಬಂಧಿಸಿದಂತೆ ಸಿಗರೇಟಿನಿಂದ ಸುಟ್ಟು ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ ನೀಡಿದ ಪತಿಯನ್ನು ಕುಂದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಇದೀಗ ಪೊಲೀಸ್ ವಶದಲ್ಲಿದ್ದಾನೆ.

ಇದನ್ನೂ ಓದಿ : ವೈರಲ್ ವಿಡಿಯೋ: ಸಿಗರೇಟಿನಿಂದ ಸುಟ್ಟು ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ!  

ಪ್ರದೀಪ್ ಹಾಗೂ ಪ್ರಿಯಾಂಕ ಪ್ರೀತಿಸುತ್ತಿದ್ದು, ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕೊಲ್ಲೂರಿನಲ್ಲಿ ವಿವಾಹವಾಗಿದ್ದರು. ಮದುವೆಯ ಬಳಿಕ ಪ್ರಿಯಾಂಕ ತನ್ನ ಪತಿ ಮನೆಯಲ್ಲೇ ನೆಲೆಸಿದ್ದರು. ಮದುವೆಯಾಗಿ ನಾಲ್ಕೈದು ತಿಂಗಳು ಕಳೆಯುತ್ತಿದ್ದಂತೆಯೇ ಪ್ರದೀಪ್ ತನ್ನ ಪತ್ನಿಯಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದು, ದಿನನಿತ್ಯವೂ ತವರು ಮನೆಯಿಂದ ಚಿನ್ನ ಹಾಗೂ ಹಣವನ್ನು ತೆಗೆದುಕೊಂಡು ಬಾ ಎಂದು ಚಿತ್ರಹಿಂಸೆ ನೀಡಲಾರಂಭಿಸಿದ್ದನು ಎಂದು ದೂರಿನಲ್ಲಿ ವಿವರಿಸಿದ್ದರು.

ಆರೋಪಿ ಪ್ರದೀಪ್ ತನ್ನ ಪತ್ನಿ ಪ್ರಿಯಾಂಕಾಗೆ ಸಿಗರೇಟಿನಿಂದ ಮುಖಕ್ಕೆ ಸುಟ್ಟು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಪತ್ನಿ ಪ್ರಿಯಾಂಕ ಕೈಮುಗಿದು ಬೇಡುವೆ ಸುಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ, ಕಾಲಿಗೆ ಬೀಳುತ್ತೇನೆಂದರು ಪ್ರದೀಪ್ ತನ್ನ ರಾಕ್ಷಸ ವರ್ತನೆಯನ್ನು ಮುಂದುವರೆಸಿದ್ದ.

ಸಿಗರೇಟಿನಿಂದ ಸುಟ್ಟು ಗಾಯ ಮಾಡಿದ ಬಳಿಕ ಮಗುವನ್ನು ಕೊಲ್ಲುವುದಾಗಿ ಹೇಳಿ ಹೊಟ್ಟೆಗೆ ತುಳಿದಿದ್ದಾನೆ. ಈ ವೇಳೆಯಲ್ಲಿ ಪ್ರಿಯಾಂಕ ತಪ್ಪಿಸಿಕೊಂಡ ಪರಿಣಾಮ ಸೊಂಟಕ್ಕೆ ಪೆಟ್ಟು ತಗುಲಿದೆ. ಆರೋಪಿ ಪ್ರದೀಪನೇ ತಾನು ಮಾಡಿದ ಕೃತ್ಯವನ್ನು ತನ್ನ ಮೊಬೈಲ್‍ನಲ್ಲಿ ವಿಡಿಯೋ ಚಿತ್ರೀಕರಿಸಿ ಪ್ರಿಯಾಂಕ ಅವರ ಪೋಷಕರಿಗೆ ಕಳುಹಿಸಿ 2ಲ್ಷಕ ರೂ ಹಣ ಹಾಗೂ 4 ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಹಣ ಮತ್ತು ಚಿನ್ನ ನೀಡದೇ ಇದ್ದಲ್ಲಿ ಪ್ರಿಯಾಂಕ ಅವರನ್ನು ಕೊಂದುಬಿಡುವುದಾಗಿ ಹೇಳಿ ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂದು ಪ್ರಿಯಾಂಕ ಕುಂದಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರೀಯಾಂಕ ದೂರಿನ ಮೇರೆಗೆ ಕುಂದಾಪುರ ಪೊಲೀಸರು ಆರೋಪಿ ಪ್ರದೀಪ್‌ ನನ್ನು ಬಂಧಿಸಿ ಇದೀಗ ವಿಚಾರಣೆ ನಡೆಸುತ್ತಿದ್ದಾರೆ.


Spread the love