ಸಿಟಿ ರವಿ ಕಪ್ಪ ಪಡೆದ ಹಳೆ ನೆನಪು ಮಾಡಿಕೊಂಡಿದ್ದೇ?: ಪದ್ಮರಾಜ್ ಪೂಜಾರಿ ಪ್ರಶ್ನೆ
ಮಂಗಳೂರು: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದಶಿಯಾಗಿದ್ದು, ತಮಿಳುನಾಡು ಹಾಗೂ ಗೋವಾದ ಉಸ್ತುವಾರಿ ವಹಿಸಿದ್ದ ಸಂದರ್ಭದಲ್ಲಿ ಸಿ.ಟಿ. ರವಿಯವರು ಕಪ್ಪ ಪಡೆದ ನೆನಪಿನಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾರನ್ನು ಲೇವಡಿ ಮಾಡುವ ಧಾಟಿಯಲ್ಲಿ ಮಾತನಾಡಿದ್ದಾರೆಯೇ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಪ್ರಶ್ನಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ನ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಧರ್ಮೇಂದ್ರ ಪ್ರದಾನ್, ರಾಧಾ ಮೋಹನ್ರವರು ಕರ್ನಾಟಕಕ್ಕೆ ಆಗಾಗ್ಗೆ ಬರುತ್ತಿರುತ್ತಾರೆ. ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಯಲು ಅವರು ಬರುತ್ತಿರಬಹುದು. ಆದರೆ ಸಿಟಿಯವರ ಹೇಳಿಕೆ ನೋಡಿದರೆ, ಬಿಜೆಪಿಯ ಆ ನಾಯಕರು ಕೂಡಾ ಕಪ್ಪ ಸ್ವೀಕರಿಸಲು ಬರುತ್ತಾರೆಯೇ ಎಂಬ ಸಂಶಯ ಮೂಡುತ್ತದೆ ಎಂದರು.
ಸುರ್ಜೇವಾಲರಿಗೆ ಜನರ ಕಷ್ಟ ಅರಿಯುವ ಆಸಕ್ತಿ ಇಲ್ಲ ಎಂಬುದಾಗಿಯೂ ಸಿ.ಟಿ. ರವಿ ಟೀಕಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸುರ್ಜೇವಾಲರು ಪಕ್ಷ ಅಧಿಕಾರಕ್ಕೆ ಬರುವಲ್ಲಿ ಹಗಲಿರುಳು ದುಡಿದವರು. ಯುವ ಕಾಂಗ್ರೆಸ್ನಿಂದ ಬಂದ ಅವರು, ಪಕ್ಷದ ಚುನಾವಣಾ ಪ್ರಣಾಳಿಕೆಯ ಕಾರ್ಯಕ್ರಮ ಅನುಷ್ಠಾನ ಆಗುತ್ತಿರುವ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದರು.
ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಬಗ್ಗೆಯೂ ಮಾತನಾಡಿರುವ ಸಿ.ಟಿ. ರವಿಯವರು, ಹಠಾತ್ ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಬಗ್ಗೆ ಸಂಶೋಧನೆ ನಡೆಸಲಿ ಎಂದು ಹೇಳಿದ್ದಾರೆ. 2021-22ರಲ್ಲಿ ನಾನು ಪಕ್ಷದ ಯಾವುದೇ ಹುದ್ದೆಯಲ್ಲಿರಲಿಲ್ಲ. ಆ ಸಂದರ್ಭ ಹಠಾತ್ ಹೃದಯಾಘಾತಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೆ. ಆ ಸಂದರ್ಭ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇತ್ತು. 2024ರಲ್ಲಿ ಸಂಸತ್ತಿನಲ್ಲಿಯೂ ಈ ಬಗ್ಗೆ ಚರ್ಚೆಯಾಗಿತ್ತು. ಆ ಸಂದರ್ಭದಲ್ಲಿ ನೀವೇನು ಕತ್ತೆ ಕಾಯುತ್ತಿದ್ದಿರಾ? ಇದಕ್ಕೆ ಕೇಂದ್ರ ಸರಕಾ ಏನಾದರೂ ಪರಿಹಾರ ಕಂಡುಕೊಂಡಿದೆಯೇ ಎಂದು ಸಿಟಿ ರವಿಯನ್ನು ಪದ್ಮರಾಜ್ ಪ್ರಶ್ನಿಸಿದರು.
ಬಿಜೆಪಿಯ ನಾಯಕರಾದ ಪ್ರಹ್ಲಾದ್ ಜೋಶಿ, ಅಶೋಕ್, ತೇಜಸ್ವಿ ಸೂರ್ಯರವರು ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕದ ನಾಯಕತ್ವ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿರುವುದಕ್ಕೆ ಇವರೇನು ಆಕಸ್ಮಿಕ ಅಧ್ಯಕ್ಷರೇ ಎಂದು ಪ್ರಶ್ನಿಸಿದ್ದಾರೆ. ಇದು ಬಿಜೆಪಿ ನಾಯಕರ ಅಲ್ಪಜ್ಞಾನವನ್ನು ಸಾಬೀತು ಪಡಿಸಿದೆ. ಕಾಂಗ್ರೆಸ್ನ ಹೈಕಮಾಂಡ್ ಪಕ್ಷದ ಕಾರ್ಯಕಾರಿ ಸಮಿತಿ. ಅಲ್ಲಿ ಎಲ್ಲಾ ವಿಷಯದ ಬಗ್ಗೆ ನಿರ್ಧಾರವಾಗುತ್ತದೆ ಎಂಬುದು ಖರ್ಗೆಯವರ ಮಾತಿನ ಅರ್ಥವಾಗಿತ್ತು ಎಂದರು.
ಪುತ್ತೂರಿನಲ್ಲಿ ಯುವತಿಯೊಬ್ಬರಿಗೆ ಅನ್ಯಾಯವಾಗಿದೆ. ಈ ವಿಷಯದಲ್ಲಿ ರಾಜಕೀಯ ಸರಿಯಲ್ಲ. ಯುವತಿಗೆ ನ್ಯಾಯ ಸಿಗಬೇಕು ಎಂಬುದು ಕಾಂಗ್ರೆಸ್ನ ನಿಲುವು. ಈ ವಿಷಯದಲ್ಲಿ ರಾಜಕೀಯ ಮಾಡಲು ಕಾಂಗ್ರೆಸ್ಗೆ ಅವಕಾಶವಿದ್ದರೂ ಅಂತಹ ಕೆಲಸ ಮಾಡಿಲ್ಲ. ಬದಲಾಗಿ ಸ್ಥಳೀಯ ಶಾಸಕರು ಯುವತಿಯ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿದ್ದರು. ಅದು ಪಕ್ಷದ ಸಾಮಾಜಿಕ ಬದ್ಧತೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪದ್ಮರಾಜ್ ಉತ್ತರಿಸಿದರು.