ಸಿದ್ದಗಂಗಾಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡಲು ವಾಟಾಳ್ ಒತ್ತಾಯ

Spread the love

ಸಿದ್ದಗಂಗಾಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡಲು ವಾಟಾಳ್ ಒತ್ತಾಯ

ರಾಮನಗರ:  ಸಿದ್ಧಗಂಗಾ ಮಠದ ಡಾ. ಶಿವಕುಮಾರಸ್ವಾಮಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಹಾಗೂ ಹೊಸ ಪಾರ್ಲಿಮೆಂಟ್‌ಗೆ ಅನುಭವ ಮಂಟಪವೆಂದು ನಾಮಕರಣ ಮಾಡಬೇಕು ಎಂದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಪಾರ್ಲಿಮೆಂಟ್ ರೀತಿ ಕಾರ್ಯನಿರ್ವಹಿಸಿದ್ದ ಅನುಭವ ಮಂಟಪದ ಹೆಸರನ್ನು ಹೊಸ ಪಾರ್ಲಿಮೆಂಟ್‌ಗೆ ನಾಮಕರಣ ಮಾಡುವುದು ಬಸವಣ್ಣನವರಿಗೆ ಕೊಡುವ ಗೌರವವಾಗಿದೆ. ಬಸವ ತತ್ವದಲ್ಲಿ, ನಂಬಿಕೆ, ಪ್ರೀತಿ ಹಾಗೂ ವಾತ್ಸಲ್ಯವನ್ನು ಕಾಣಬಹುದಾಗಿದೆ. ಆದರೆ ಕರ್ನಾಟಕವನ್ನು ಆಳ್ವಿಕೆ ಮಾಡಿದ ಸರ್ಕಾರಗಳು ವಿಶ್ವಕ್ಕೆ ಬಸವಣ್ಣ ಅವರನ್ನು ಪರಿಚಯಿಸುವ ಕೆಲಸ ಮಾಡುವುದರಲ್ಲಿ ವಿಫಲವಾಗಿವೆ. ಅದರ ಪ್ರಾಮಾಣಿಕ ಪ್ರಯತ್ನವನ್ನೂ ಸಹ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಸವಣ್ಣನವರ ಭಂಡಾರವೇ ನಿರ್ಮಾಣವಾಗಬೇಕಿತ್ತು. ಒಂದು ಸಾವಿರ ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣ ಆಗಬೇಕಿತ್ತು. ಇಲ್ಲಿ ಅನುಭವ ಮಂಟಪ ನಿರ್ಮಿಸಿ, ಅಕ್ಕಮಹಾದೇವಿ ಅಲ್ಲಮಪ್ರಭು, ಹರಳಯ್ಯ, ಮಾದಾರಚನ್ನಯ್ಯ ಅವರ ರೀತಿ ಶರಣರ ಪರಿಚಯಿಸುವ ಕೆಲಸ ಆಗಬೇಕಿತ್ತು ಅದಾಗಲಿಲ್ಲ. ಬಸವಣ್ಣನವರ ಪ್ರತಿಮೆಯನ್ನು ದೆಹಲಿಯ ಹೊಸ ಪಾರ್ಲಿಮೆಂಟ್ ಭವನದ ಮುಂಭಾಗ ಸ್ಥಾಪನೆ ಮಾಡಬೇಕು. ಈ ಮಹತ್ಕಾರ್ಯಕ್ಕಾಗಿ ಪ್ರಧಾನಿ ಸೇರಿದಂತೆ ವಿರೋಧ ಪಕ್ಷದ ಎಲ್ಲರೂ ಈ ಕುರಿತು ಚಿಂತನೆ ನಡೆಸಬೇಕು ಎಂದು ಹೇಳಿದರು.

ಬಸವಣ್ಣ ಅವರ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು, ಹೋರಾಟಗಳು ಸಾಹಿತಿಗಳನ್ನು ಒಳಗೊಂಡಂತೆ ಜೂನ್ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದ್ದು ಅಂದು ಪಾರ್ಲಿಮೆಂಟ್ ಮುಂಭಾಗ ಬಸವಣ್ಣ ಪ್ರತಿಮೆ ನಿರ್ಮಾಣ ಹಾಗೂ ಪಾರ್ಲಿಮೆಂಟ್‌ಗೆ ಅನುಭವ ಮಂಟಪ ಹೆಸರು ನಾಮಕಾರಣ ಮಾಡುವಂತೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ವಾಟಾಳ್ ನಾಗರಾಜು ಹೇಳಿದರು.

ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ ಜಿಲ್ಲಾಧ್ಯಕ್ಷ ಸಿ.ಎಸ್ ಜಯಕುಮಾರ್, ತಾಲೂಕು ಕಾರ್ಯದರ್ಶಿ ಸುರೇಶ್ ಕೊತ್ತೀಪುರ, ಮುಖಂಡ ಅರ್ಜುನ್. ರೈತಸಂಘದ ರಾಜ್ಯಾಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್, ವಾಟಾಳ್ ಪಕ್ಷದ ಪಾರ್ಥ ಸಾರಥಿ ಇತರರು ಇದೇ ವೇಳೆ ಉಪಸ್ಥಿತರಿದ್ದರು.


Spread the love