ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಲಿ- ಶ್ರೀನಿವಾಸ್ ಪ್ರಸಾದ್

Spread the love

ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಲಿ- ಶ್ರೀನಿವಾಸ್ ಪ್ರಸಾದ್ 

ಚಾಮರಾಜನಗರ: ರಾಜ್ಯದ 224 ಕ್ಷೇತ್ರದಲ್ಲೂ ಕರೆಯುತ್ತಾರೆ ಎಂದು ಹೇಳುವ ಸಿದ್ದರಾಮಯ್ಯ ಅವರಿಗೆ ಧೈರ್ಯ ಇದ್ದರೇ ಚಾಮುಂಡೇಶ್ವರಿಯಲ್ಲೇ ಅಥವಾ ವರುಣದಲ್ಲಿ ನಿಲ್ಲಬಹುದಿತ್ತು. ಕೋಲಾರದ ತನಕ ಓಡಬೇಕಿತ್ತಾ? ವೀರಾವೇಶದ ಮಾತುಗಳು ಚುನಾವಣೆ ಬಂದಾಗ ಗೊತ್ತಾಗಲಿದೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೋಲಾರ ಅತ್ಯಂತ ಸುರಕ್ಷಿತ ಕ್ಷೇತ್ರ ಎಂದು ಅಲ್ಲಿಗೆ ಹೋಗಿದ್ದಾರೆ. ಸುರಕ್ಷಿತ ಅಲ್ಲದಿದ್ದರೆ ಬಾದಾಮಿಯಲ್ಲಿ ಯಾಕೆ ನಿಲ್ಲುವುದಿಲ್ಲ? ಚಾಮುಂಡೇಶ್ವರಿಯಲ್ಲಿ ಯಾಕೆ ಸ್ಪರ್ಧಿಸುವುದಿಲ್ಲ? ಚಾಮರಾಜಪೇಟೆಗೂ ಹೋಗಿ ಬಂದರು. ಕೊನೆಗೆ ಕೋಲಾರಕ್ಕೆ ಹೋಗಿದ್ದಾರೆ. ಅಲ್ಲಿ ಕುರುಬರು, ಮುಸ್ಲಿಮರು ಹೆಚ್ಚಾಗಿದ್ದಾರೆ. ಸುಲಭವಾಗಿ ಗೆದ್ದು ಮುಖ್ಯಮಂತ್ರಿಯಾಗಬಹುದು ಎಂದು ಅಲ್ಲಿಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಲ್ಲಿಕಾರ್ಜುನ ಖರ್ಗೆ ಓರ್ವ ಅವಕಾಶವಾದಿ ರಾಜಕಾರಣಿ ಎಂದು ಟೀಕಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಜೊತೆಗೆ ವಿಪಕ್ಷ ನಾಯಕರಾಗಿದ್ದ ಖರ್ಗೆ ರಾಜ್ಯ ರಾಜಕಾರಣದಲ್ಲಿ ತಮ್ಮದೇನು ನಡೆಯಲ್ಲ ಎಂದು ಗೊತ್ತಾದ ಬಳಿಕ ಸಂಸತ್ತಿಗೆ ಹಾರಿ ಕಾರ್ಮಿಕ ಸಚಿವರಾದರು. ಖರ್ಗೆ ಓರ್ವ ಅವಕಾಶವಾದಿ ರಾಜಕಾರಣಿಯಷ್ಟೇ. ಅವರೇನೂ ಪಕ್ಷ ಕಟ್ಟಿದ್ದಾರಾ..? ಹೋರಾಟ ಮಾಡಿದ್ದಾರಾ..? ಎಂದು ತೀಕ್ಷ್ಣ ಮಾತುಗಳಿಂದ ಟೀಕಾ ಪ್ರಹಾರ ನಡೆಸಿದರು. ಈಗ ಖರ್ಗೆಗೆ ಮರದ ಕತ್ತಿ ಹಾಗೂ ರಟ್ಟಿನ ಗುರಾಣಿ ಕೊಟ್ಟು ಯುದ್ಧಕ್ಕೆ ಕಳುಹಿಸಿದ್ದಾರೆ. ಪ್ರಜಾ ಪ್ರಭುತ್ವದಲ್ಲಿ ಜನರು ಅರ್ಥ ಮಾಡಿಕೊಂಡಿದ್ದಾರೆ, ಅಭಿವೃದ್ಧಿ ಪರ ಸರ್ಕಾರವನ್ನು ಆರಿಸುತ್ತಾರೆ. ಬಿಜೆಪಿ ಪರ ಅಲೆ ಇದೆ ಎಂದು ವಿಶ್ವಾಸ ಹೊರಹಾಕಿದರು.

ಸರ್ಕಾರಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಈ ವಿಚಾರದ ಬಗ್ಗೆ ಈಗಾಗಲೇ ಅಸಮಾಧಾನ ವ್ಯಕ್ತವಾಗಿದೆ. ಕೇಸರಿ ಬಣ್ಣ ತ್ಯಾಗದ ಪ್ರತೀಕ. ಎಲ್ಲರೂ ಗೌರವ ಕೊಡುತ್ತಾರೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದರು.

ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ಟಿಪ್ಪು ಪ್ರತಿಮೆಯನ್ನು ಅವರ ಸ್ವಂತಕ್ಕೆ ಮಾಡಿಕೊಂಡರೆ ಅದರಲ್ಲೇನೂ ತಪ್ಪಿಲ್ಲ. ತೊಂದರೆಯೂ ಇಲ್ಲ. ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಮಾಡಬಾರದು ಎಂದು ಈಗಾಗಲೇ ತೀರ್ಮಾನವಾಗಿದೆ. ಮುಸ್ಲಿಂ ಸಮುದಾಯದವರು ಪ್ರತಿಮೆ ನಿರ್ಮಿಸಿದರೆ, ಜಯಂತಿ ಆಚರಿಸಿದರೆ ಅಭ್ಯಂತರವಿಲ್ಲ. ಮುಸ್ಲಿಮರಲ್ಲಿ ಪ್ರತಿಮೆ ಸಂಸ್ಕೃತಿ, ವಿಗ್ರಹಾರಾಧನೆ ಇಲ್ಲ. ಹಾಗಾಗಿ, ಅವರು ಇನ್ನೊಮ್ಮೆ ಯೋಚನೆ ಮಾಡಲಿ ಎಂದರು.


Spread the love

Leave a Reply

Please enter your comment!
Please enter your name here