
ಸಿದ್ದರಾಮಯ್ಯರನ್ನು ಹೊಡೆದು ಹಾಕಲು ಕರೆ ಕೊಟ್ಟ ಅಶ್ವಥ್ ನಾರಾಯಣ್ ರನ್ನು ಬಂಧಿಸಿ – ಹಮ್ಮದ್ ಉಡುಪಿ
ಉಡುಪಿ: ರಾಜ್ಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನೂ ಕೊಲ್ಲಲು ಕರೆ ಕೊಟ್ಟಿರುವ ಸಚಿವ ಡಾ| ಸಿ ಎನ್ ಅಶ್ವಥ್ ನಾರಾಯಣ್ ವಿರುದ್ದ ರಾಜ್ಯದ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿ ಜೈಲಿಗೆ ಕಳಿಸುವಂತೆ ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಮ್ಮದ್ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕೊಲೆ ಮಾಡುವಂತೆ ಕರೆ ನೀಡಿದ ಅಶ್ವತ್ಥನಾರಾಯಣ ಅವರು ಬಿಜೆಪಿಯ ಕೊಲೆಗಡುಕ ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಬಿಜೆಪಿ ಹೇಳುತ್ತಿದ್ದ ಯುಪಿ ಮಾಡೆಲ್ ಇದೇ ಇರಬಹುದು ಎನ್ನುವ ಸಂಶಯ ಕಾಡುತ್ತದೆ. ಒಂದು ಕಡೆ ಮುಖ್ಯಮಂತ್ರಿ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಪ್ರಚೋದಿಸಿದರೆ ಅವರ ಸಂಪುಟದ ಸದಸ್ಯರು ಕೊಲೆ ಮಾಡಲು ಹೇಳುವಷ್ಠು ನೀಚ ಕೃತ್ಯಕ್ಕೆ ತೊಡಗಿರುವುದು ಸಚಿವ ಅಶ್ವಥ್ ನಾರಾಯಣ್ ಅವರು ಹೇಳಿಕೆಯಿಂದ ಸಾಬೀತಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಅಶ್ವಥ್ ನಾರಾಯಣರನ್ನು ವಜಾಗೊಳಿಸಿ, ಕಾನೂನು ಕ್ರಮ ಜರುಗಿಸಬೇಕು’. ಅಲ್ಲದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವಂತೆ ಹಮ್ಮದ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.