ಸಿದ್ದರಾಮಯ್ಯರಿಗೆ ಮೊಟ್ಟೆಯನ್ನು ಎಸೆಯುವ ಬದಲು ಅಪೌಷ್ಠಿಕತೆ ಹೊಂದಿರುವ ಮಕ್ಕಳಿಗೆ ನೀಡಿ – ವೆರೋನಿಕಾ ಕರ್ನೆಲಿಯೊ

Spread the love

ಸಿದ್ದರಾಮಯ್ಯರಿಗೆ ಮೊಟ್ಟೆಯನ್ನು ಎಸೆಯುವ ಬದಲು ಅಪೌಷ್ಠಿಕತೆ ಹೊಂದಿರುವ ಮಕ್ಕಳಿಗೆ ನೀಡಿ – ವೆರೋನಿಕಾ ಕರ್ನೆಲಿಯೊ

ಉಡುಪಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮಡಿಕೇರಿಯಲ್ಲಿ ಎಸೆಯಲು ಉಪಯೋಗಿಸಿದ ಮೊಟ್ಟೆಯನ್ನು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲು ಉಪಯೋಗಿಸಬೇಕಿತ್ತು ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ದ ನಡೆದ ಪ್ರತಿಭಟನೆಯು ನೇರ ಮತ್ತು ಪರೋಕ್ಷವಾಗಿ ಬಿಜೆಪಿ ಸರ್ಕಾರದ ಪ್ರಾಯೋಜಿತ ಕೃತ್ಯವಾಗಿದೆ.’ಅಸಹಿಷ್ಣುತೆಯನ್ನು ಹಿಂದಿನಿಂದಲೂ ಕಾಂಗ್ರೆಸ್ ವಿರೋಧಿಸುತ್ತಿದೆ. ಸರಕಾರ ಪ್ರವಾಹದಿಂದ ತತ್ತರಿಸಿದ ಜನರ ನೋವನ್ನು ಆಲಿಸಲು ವಿಫಲವಾದಾಗ ಒರ್ವ ವಿರೋಧ ಪಕ್ಷದ ನಾಯಕರಾಗಿ ಅಲ್ಲಿನ ಸಮಸ್ಯೆಗಳನ್ನು ಅರಿತು ಸರಕಾರಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯ ಮಾಡಲು ತೆರಳಿದ್ದಾಗ ಇಂತಹ ಹಿಂಸಾಚಾರದ ಪ್ರತಿಭಟನೆಯ ಮೂಲಕ ಕಾಂಗ್ರೆಸ್‍ನ ಜನಪರ ಧ್ವನಿಯನ್ನು ಮುಚ್ಚಿಸಲು ಬಿಜೆಪಿ ಯತ್ನಿಸುತ್ತಿರುವು ಮೂರ್ಖತನವಾಗಿದೆ. ರಾಜ್ಯವನ್ನು ಕೋಮುವಾದಿ ಮತ್ತು ಗೂಂಡಾಗಳ ಕೈಗೆ ಕೊಟ್ಟು ರಾಜ್ಯ ಸರ್ಕಾರ ಮೌನ ವಹಿಸಿದೆ. ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.

ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಎಡವಿದಾಗ ವಿರೋಧ ಪಕ್ಷ ಅವರನ್ನು ಎಚ್ಚರಿಸುವ ಕೆಲಸ ಮಾಡುತ್ತದೆ ಆದರೆ ಅದನ್ನು ಕೂಡ ಮಾಡಬಾರದು ಎನ್ನುವ ರೀತಿಯಲ್ಲಿ ರಾಜ್ಯದಲ್ಲಿ ತನ್ನ ಬಿಜೆಪಿ ಕಾರ್ಯಕರ್ತರ ಮೂಲಕ ಭಯದ ವಾತಾವರಣವನ್ನು ಸೃಷ್ಠಿಸಲು ಸರಕಾರ ಯತ್ನಿಸುತ್ತಿದೆ. ಸಿದ್ದರಾಮಯ್ಯ ಅವರ ವಿರುದ್ದ ಪ್ರತಿಭಟನೆಯಲ್ಲಿ ಪರೋಕ್ಷವಾಗಿ ರಾಜ್ಯ ಸರಕಾರದ ಬೆಂಬಲ ಇದೆ ಎನ್ನುವುದು ಕೆಲವೊಂದು ಮಂತ್ರಿಗಳು ಮತ್ತು ಶಾಸಕರ ಹೇಳಿಕೆಗಳಿಂದಲೇ ಸ್ಪಷ್ಟವಾಗುತ್ತಿದೆ. ಸರಕಾರ ಭಾವನಾತ್ಮಕ ವಿಚಾರಗಳನ್ನೇ ಹಿಡಿದುಕೊಂಡು ಹೋಗುತ್ತಿರುವುದು ಬಿಟ್ಟರೆ ಕಳೆದ ಬಾರಿ ನೆರೆಯಿಂದ ಮನೆ ಕಳೆದುಕೊಂಡು ಹಾಗೂ ಇತರ ರೂಪದಲ್ಲಿ ನಷ್ಠ ಅನುಭವಿಸಿದ ಜನರಿಗೆ ಈ ವರೆಗೆ ಪರಿಹಾರ ನೀಡಲು ಶಕ್ತವಾಗಿಲ್ಲ.

ಒರ್ವ ವಿರೋಧ ಪಕ್ಷದ ನಾಯಕನ ಮೇಲೆ ನಡೆದಿರುವ ದಾಳಿ ನೇರವಾಗಿ ಸರಕಾರಕ್ಕೆ ನಾಚಿಕೇಗೇಡಿನ ಸಂಗತಿಯಾಗಿದೆ. ಮಾಜಿ ಮುಖ್ಯಮಂತ್ರಿಗೆ ರಕ್ಷಣೆ ನೀಡಲು ವಿಫಲವಾಗಿರುವ ಸರಕಾರ ಸಾಮಾನ್ಯ ಜನರಿಗೆ ಯಾವ ರೀತಿಯ ರಕ್ಷಣೆ ನೀಡುತ್ತದೆ? ಈ ಘಟನೆಯಲ್ಲಿ ಯಾರ ಕೈವಾಡ ಇದೆ ಎನ್ನುವುದನ್ನು ಸರಕಾರ ತನಿಖೆ ನಡೆಸಿ ಅವರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love