ಸಿದ್ದರಾಮಯ್ಯರ ಮೇಲೆ ಅನುಕಂಪ ಬರುತ್ತಿದೆ:ಹೆಚ್ಡಿಕೆ

Spread the love

ಸಿದ್ದರಾಮಯ್ಯರ ಮೇಲೆ ಅನುಕಂಪ ಬರುತ್ತಿದೆ:ಹೆಚ್ಡಿಕೆ

ಮೈಸೂರು: ಸಿದ್ದರಾಮಯ್ಯ ದೇವರಾಜ ಅರಸು ಬಳಿಕ ಪೂರ್ಣಾವಧಿ ಅಧಿಕಾರ ನಡೆಸಿದ ಮುಖ್ಯಮಂತ್ರಿ. ಎರಡು ಬಾರಿ ಉಪ ಮುಖ್ಯಮಂತ್ರಿ, ಹದಿಮೂರು ಬಾರಿ ಬಜೆಟ್ ಮಂಡಿಸಿ, ಬಡವರಿಗೆ ಹಲವು ಭಾಗ್ಯಗಳನ್ನು ನೀಡಿರುವ ಮಹಾನ್ ನಾಯಕ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಹುಡುಕಾಡುವುದನ್ನು ನೋಡಿದರೆ ಅನುಕಂಪ ಬರುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಟಿಯೇ ಈ ರೀತಿ ಆತಂಕಕ್ಕೊಳಗಾದರೆ ಕಾರ್ಯಕರ್ತರ ಗತಿಯೇನು. ಕೋಲಾರದಲ್ಲಿ ಸೋಲಿನ ಭಯದಿಂದ ಹೈಕಮಾಂಡ್ ಮೇಲೆ ಹೇಳುತ್ತಿದ್ದಾರೋ ನನಗೆ ಗೊತ್ತಿಲ್ಲ. ನನ್ನನ್ನೂ ಸೋಲಿಸಲು ತಂತ್ರ ರೂಪಿಸುತ್ತಿದ್ದಾರೆ. ಆದರೆ ನನ್ನನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರ ಕನಕಪುರದಲ್ಲಿ ಪೂರಕ ವಾತಾವರಣವಿದ್ದು 2028ಕ್ಕೆ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.

ಐತಿಹಾಸಿಕ ಪಂಚರತ್ನ ಯಾತ್ರೆಗೆ ಅಪಾರ ಜನ ಬೆಂಬಲ ವ್ಯಕ್ತವಾಗಿದ್ದು, ಮಾ.26ರಂದು ಭಾನುವಾರ ಚಾಮುಂಡಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿ ರಿಂಗ್ ರಸ್ತೆ ಬಳಿಯ ಮೈದಾನದಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮೂರು ತಿಂಗಳ ಹಿಂದೆ ಆರಂಭವಾದ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಚಾಮುಂಡೇಶ್ವರಿ ಸನ್ನಿಧಿಯಲ್ಲಿಯೇ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಅದರಂತೆ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. 26ರಂದು ನಡೆಯುವ ಕಾರ್ಯಕ್ರಮದಲ್ಲಿ ೧೦ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ದೇವೇಗೌಡರು ರಾಮನಗರದಿಂದ ರೋಡ್ ಶೋ ನಡೆಸುತ್ತಿಲ್ಲ. ಬದಲಿಗೆ ಶ್ರೀರಾಂಪುರದಿಂದ ಕಾರ್ಯಕ್ರಮದ ಸ್ಥಳದವರೆಗೆ ಮಿನಿ ರೋಡ್ ಶೋ ನಡೆಸಲಿದ್ದಾರೆ ಎಂದರು.

ಏಪ್ರಿಲ್ ಮೊದಲ ವಾರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ. ಸಮಾರೋಪದ ಮೂಲಕವೇ ಜೆಡಿಎಸ್ ಚುನಾವಣಾ ಪ್ರಚಾರವನ್ನೂ ಆರಂಭಿಸುತ್ತಿದ್ದೇವೆ. ಯಾತ್ರೆಯ ವೇಳೆ ಜನ ನಮ್ಮ ಕಾರ್ಯಕ್ರಮಗಳನ್ನು ಸ್ವೀಕರಿಸಿದ್ದಾರೆ. ಈ ಬಾರಿ ಜೆಡಿಎಸ್ 123 ಸ್ಥಾನ ಗೆದ್ದು ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಲಿದ್ದು, ವಾತಾವರಣವೂ ಪೂರಕವಾಗಿದೆ. ಯಾರು ಏನೇ ಹೇಳಿದರೂ ಫಲಿತಾಂಶದ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದರು.

ನಾಡಿನ ರೈತರ, ಮಹಿಳೆಯರ ಅಭಿವೃದ್ಧಿ ಸೇರಿದಂತೆ ಸರ್ವತೋಮುಖ ಬೆಳವಣಿಗೆಗೆ ಪಂಚರತ್ನ ಯೋಜನೆಗಳನ್ನು ರೂಪಿಸಲಾಗಿದೆ. ಇವು ದೇವೇಗೌಡರ ಕನಸು. ಆದರೆ, ಅವರ ಸುದೀರ್ಘ ರಾಜಕಾರಣದಲ್ಲಿ ಅಧಿಕಾರ ಸಿಕ್ಕಿದ್ದು ಕೆಲವು ತಿಂಗಳು ಮಾತ್ರ. ಹೀಗಾಗಿ ಅವರ ಕನಸನ್ನು ಈಡೇರಿಸಲು ಪಣ ತೊಟ್ಟಿದ್ದೇನೆ. ಬಿಜೆಪಿಯವರು ಹೇಳುವಂತೆ ಅಮೃತ ಕಾಲಕ್ಕೆ 2042ರವರೆಗೆ ಕಾಯಬೇಕಿಲ್ಲ. ನನಗೆ ಐದು ವರ್ಷಗಳ ಅಧಿಕಾರ ಕೊಡಿ. ಸುವರ್ಣ ರಾಜ್ಯ ಸ್ಥಾಪನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.


Spread the love