ಸಿದ್ದರಾಮಯ್ಯ ಹೊರಗೆ ಬಸಪ್ಪ, ಒಳಗೆ ವಿಷಪ್ಪ: ಛಲವಾದಿ ನಾರಾಯಣಸ್ವಾಮಿ

Spread the love

ಸಿದ್ದರಾಮಯ್ಯ ಹೊರಗೆ ಬಸಪ್ಪ, ಒಳಗೆ ವಿಷಪ್ಪ: ಛಲವಾದಿ ನಾರಾಯಣಸ್ವಾಮಿ

ಸಿದ್ದರಾಮಯ್ಯ ಅಹಿಂದ ಎನ್ನುತ್ತಾ ದಲಿತ ನಾಯರನ್ನು ಮುಗಿಸುತ್ತಾ ಬಂದಿದ್ದಾರೆ. ಅವರು ಹೊರಗೆ ಬಸಪ್ಪ, ಒಳಗೆ ವಿಷಪ್ಪ. ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದರು. ಮುನಿಯಪ್ಪ ಸೋಲಿಗೆ ಕಾರಣರಾದರು ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮುಸ್ಲಿಂ ಸಮುದಾಯದ ನಾಯಕರಾದ ಇಬ್ರಾಹಿಂ, ರೋಷನ್ ಬೇಗ್ ಮುಂತಾದ ನಾಯಕರನ್ನು ಮೂಲೆಗುಂಪು ಮಾಡಿದವರು ಸಿದ್ದರಾಮಯ್ಯ. ಅವರ ಇಬ್ಬಗೆಯ ನೀತಿಗೆ ಬೇಸತ್ತ ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ವಿಶ್ವನಾಥ್ ಪಕ್ಷ ತೊರೆದರು ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ದೊಡ್ಡ ನಾಯಕರಲ್ಲ. ಅವರು ಅಲೆಮಾರಿಯಾಗಿದ್ದು, ಪ್ರತಿ ಚುನಾವಣೆಯಲ್ಲೂ ಸುರಕ್ಷಿತ ಕ್ಷೇತ್ರಕ್ಕೆ ಹುಡುಕಾಟ ನಡೆಸುತ್ತಾರೆ. ಈ ಬಾರಿ ಅವರು ಎರಡು ಕ್ಷೇತ್ರಗಳಲ್ಲೂ ಸೋಲುವುದು ಖಚಿತ. ಅವರು ಯಾವುದೇ ಕಾರಣಕ್ಕೂ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಮತ್ತೆ ಮುಖ್ಯಮಂತ್ರಿಯೂ ಆಗುವುದಿಲ್ಲ. ಅವರ ರಾಜಕೀಯ ಜೀವನ ಈ ಚುನಾವಣೆಯಲ್ಲೇ ಅಂತ್ಯವಾಗಲಿದೆ ಎಂದರು.

ನಮ್ಮ ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ಚುನಾವಣೆ ಟೂಲ್‌ಕಿಟ್ ಮಾಡಿಕೊಂಡಿತ್ತು. ದೇಶದಲ್ಲಿ ಸುಭದ್ರವಾದ ನ್ಯಾಯಾಂಗ ವ್ಯವಸ್ಥೆ ಇದ್ದರೂ, 40ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಕಾಂಗ್ರೆಸ್ ನ್ಯಾಯಾಲಯದ ಮೆಟ್ಟಿಲೇರಿಲ್ಲ. ಆದರೂ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದರೂ ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡಿದೆ. ಈ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧಕ್ಷ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ತಮ್ಮದೇ ಸರ್ಕಾರ ಇದ್ದಾಗ ಸಿದ್ದಾರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲುವುದನ್ನು ಮನಗಂಡು ಬಾದಾಮಿಯಲ್ಲೂ ಸ್ಪರ್ಧಿಸಿದರು. ಈಗ ವರುಣಾ ಮತ್ತು ಕೋಲಾರದಲ್ಲೂ ಸ್ಪರ್ಧೆಗೆ ಮುಂದಾಗಿದ್ದಾರೆ. ಯಾವುದಾದರು ಒಂದು ಕ್ಷೇತ್ರದಲ್ಲಿ ನಿಂತು ಗೆಲ್ಲುವುದು ನಿಜವಾದ ನಾಯಕನ ಲಕ್ಷಣ. 2 ಕ್ಷೇತ್ರಗಳಲ್ಲಿ ನಿಲ್ಲುವವರನ್ನು ನಾಯಕ ಎನ್ನಲಾಗುವುದಿಲ್ಲ. ಬದಲಿಗೆ ದುರ್ಬಲ ನಾಯಕ ಎನ್ನುತ್ತಾರೆ ಎಂದು ಲೇವಡಿ ಮಾಡಿದರು.

ಒಳ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಸೂಕ್ತ ನಿರ್ಧಾರ ಮಾಡುವಲ್ಲಿ ವಿಫಲವಾಗಿದ್ದವು. ಅವರು ಮಾಡಲಾಗದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿತೋರಿಸಿದೆ. ಕಾಂಗ್ರೆಸ್ ಪ್ರಚೋದನೆಯಿಂದ ಕೆಲವರು ಒಳಮೀಸಲಾತಿ ವಿರೋಧಿಸುತ್ತಿದ್ದಾರೆ. ಕೊರಚ, ಕೊರಮ, ಬಂಜಾರ ಮತ್ತು ಬೋವಿ ಸಮುದಾಯಕ್ಕೆ ಶೇ.೩ರಷ್ಟು ಇದ್ದ ಮೀಸಲಾತಿಯನ್ನು ೪.೫ಕ್ಕೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.

ಬಿಜೆಪಿ ನಗರಾಧಕ್ಷ ಟಿ.ಎಸ್. ಶ್ರೀವತ್ಸ, ಬಿಜೆಪಿ ಜಿಲ್ಲಾ ಉಪಾಧಕ್ಷೆ ಶಾಂತಮ್ಮ, ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಮುಖಂಡರಾದ ವಸಂತ್ ಕುಮಾರ್ ಇದ್ದರು.


Spread the love