‘ಸಿದ್ದರಾಮಯ್ಯ 75’ ಸಿದ್ದತಾ ಸಭೆಯಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಶಾಸಕ ರಮೇಶ್ ಕುಮಾರ್!

Spread the love

‘ಸಿದ್ದರಾಮಯ್ಯ 75’ ಸಿದ್ದತಾ ಸಭೆಯಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಶಾಸಕ ರಮೇಶ್ ಕುಮಾರ್!

ಕೋಲಾರ: ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ‘ಸಿದ್ದರಾಮಯ್ಯ 75’ ಕಾರ್ಯಕ್ರಮಕ್ಕೆ ಸಿದ್ಧತೆ ಸಂಬಂಧಿಸಿದಂತೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಬಣ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಬಣದ ನಡುವೆ ಕಿತ್ತಾಟ ನಡೆಯಿತು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಉಭಯ ಬಣಗಳ ನಾಯಕರು ಪರಸ್ಪರ ಕೈಮಿಲಾಯಿಸುವ ಹಂತ ತಲುಪಿದ್ದರು. ಈ ಜಗಳವನ್ನು ಚಿತ್ರೀಕರಿಸಲು ಮುಂದಾದ ಮಾಧ್ಯಮದವರ ಮೇಲೆ ರಮೇಶ್ ಕುಮಾರ್ ಕೈ ಮಾಡಿ ತಳ್ಳಿದರು.

ಬ್ಯಾನರ್‌ನಲ್ಲಿ ಮುನಿಯಪ್ಪ ಅವರ ಭಾವಚಿತ್ರ ಹಾಕಿಲ್ಲ ಎಂದು ಅವರ ಬಣದವರು ಆಕ್ಷೇಪ ತೆಗೆದರು. ಮುನಿಯಪ್ಪ ಬೆಂಬಲಿಗ ಹಾಗೂ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಮಾತನಾಡಿ, ‘ನಿಮ್ಮನ್ನೆಲ್ಲಾ ಕಾಂಗ್ರೆಸ್‌ಗೆ ಕರೆ ತಂದಿದ್ದೇ ಮುನಿಯಪ್ಪ’ ಎನ್ನುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರ ಕೋಪ ನೆತ್ತಿಗೇರಿತು. ಆಗ ಮತ್ತೆ ಬೆಂಬಲಿಗರ ಕಿತ್ತಾಟ ಆರಂಭವಾಯಿತು.

ಕೆಪಿಸಿಸಿ ಉಪಾಧ್ಯಕ್ಷ, ಕೋಲಾರ ಉಸ್ತುವಾರಿ ಕೆ.ನಾರಾಯಣಸ್ವಾಮಿ ಮಾತನಾಡಿ, ‘ಭಿನ್ನಾಭಿಪ್ರಾಯ ಸಹಜ. ಆದರೆ ಅದನ್ನು ಪಕ್ಷದ ಮುಖಂಡರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಅಶಿಸ್ತನ್ನು ಪಕ್ಷ ಸಹಿಸಲ್ಲ. ಶಿಸ್ತು ಕ್ರಮ ಜರುಗಿಸಲು ಕೆಪಿಸಿಸಿ ಅಧ್ಯಕ್ಷರೇ ಅಧಿಕಾರ ನೀಡಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಶಾಸಕರಾದ ರಮೇಶ್ ಕುಮಾರ್, ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎರಡೂ ಬಣಗಳ ಕಾರ್ಯಕರ್ತರು ಭಾಗವಹಿಸಿದ್ದರು.


Spread the love

Leave a Reply

Please enter your comment!
Please enter your name here