
ಸುಂದರ ಮತ್ತು ಸಮೃದ್ಧ ನವ ಕಾಪು ನಿರ್ಮಾಣಕ್ಕೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಕಾಪು : ಆಸ್ಪತ್ರೆ, ಶಿಕ್ಷಣ, ತಂತ್ರಜ್ನಾನ, ಪ್ರವಾಸೋದ್ಯಮ, ಸರಕಾರಿ ಕಚೇರಿಗಳ ಸಂಕೀರ್ಣ, ಕೈಗಾರಿಕೆ ಅಭಿವೃದ್ಧಿ, ವಸತಿ – ನಿವೇಶನ ಸಹಿತವಾಗಿ ಅಭಿವೃದ್ಧಿಗೆ ಪೂರಕವಾಗುವ ನವ ಕಾಪು ನಿರ್ಮಾಣ ಘೋಷಣೆಯ ದೂರದರ್ಶಿತ್ವದ ಚಿಂತನೆಯುಳ್ಳ ಕಾಪು ಕ್ಷೇತ್ರದ ಬಿಜೆಪಿ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.
ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಷಿಯಾಗಿ ಕ್ಷೇತ್ರದ ಜನತೆಯ ಅಗತ್ಯತೆಗಳನ್ನು ಪಟ್ಟಿ ಮಾಡಿಕೊಂಡು, ಜನಾಭಿಪ್ರಾಯದಂತೆ ನವ ಕಾಪು ನಿರ್ಮಾಣದ ಸಂಕಲ್ಪಕ್ಕೆ ಪೂರಕವಾಗುವ ಪ್ರಣಾಳಿಕೆಯನ್ನು ಸಿದ್ಧ ಪಡಿಸಲಾಗಿದೆ. ನಾಗರಿಕರು ಮತ್ತು ಜನಪ್ರತಿನಿಽಗಳ ಅಭಿಪ್ರಾಯ, ಸಲಹೆ, ಸೂಚನೆಗಳೊಂದಿಗೆ ಕಾಪು ಕ್ಷೇತ್ರವನ್ನು ರಾಜ್ಯಕ್ಕೇ ಮಾದರಿಯಾಗುವಂತಹ ಕ್ಷೇತ್ರವನ್ನಾಗಿ ಪರಿವರ್ತಿಸಬೇಕೆಂಬ ಕಲ್ಪನೆಯಿದೆ. ಅದಕ್ಕಾಗಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ, ಮೋದಿ ಅವರ ಕೈ ಬಲಪಡಿಸಲು ಪ್ರೋತ್ಸಾಹ ನೀಡುವಂತೆ ವಿನಂತಿಸಿದರು.
ಪ್ರಣಾಳಿಕೆಗಳಲ್ಲಿರುವ ಪ್ರಮುಖ ಅಂಶಗಳು
-ಕಾಪು ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದು.
– ಲೈಟ್ಹೌಸ್ ಬೀಚ್ನ ಸಮಗ್ರ ಅಭಿವೃದ್ಧಿ ಮೂಲಕ ಪ್ರವಾಸಿಗರನ್ನು ಆಕರ್ಷಿಸುವುದು.
– ಕಾಪು ದೀಪಸ್ತಂಭದ ಬಳಿ ಸರ್ವ ಋತುವಿನಲ್ಲಿಯೂ ಮೀನುಗಾರರಿಗೆ ಅನುಕೂಲವಾಗುವಂತೆ ಮೀನುಗಾರಿಕಾ ಜಟ್ಟಿ ನಿರ್ಮಾಣ, ಸಮುದ್ರ ಕೊರೆತಕ್ಕೆ ಶಾಶ್ವತ ತಡೆಗೋಡೆ, ವರ್ಷದಲ್ಲಿ ಹತ್ತು ತಿಂಗಳು ನಾಡದೋಣಿ ಮೀನುಗಾರರಿಗೆ ಪ್ರತೀ ತಿಂಗಳು ೩೦೦ ಲೀಟರ್ ಸೀಮೆಎಣ್ಣೆ.
– ಹೆಜಮಾಡಿ/ಪಡುಬಿದ್ರಿಯಲ್ಲಿ ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಮತ್ಸ ಗ್ರಾಮ ಸ್ಥಾಪನೆ, ೬೦ ವರ್ಷ ದಾಟಿದ ಮೀನುಗಾರರಿಗೆ ಪಿಂಚಣಿ ಯೋಜನೆ.
– ತಾಲೂಕಿನಲ್ಲಿ ಪ್ರಮುಖ ಸರಕಾರಿ ಕಟ್ಟಡಗಳ ಸಂಕೀರ್ಣ, ಪ್ರವಾಸಿ ಮಂದಿರ ಹಾಗೂ ತಾಲೂಕು ಪಂಚಾಯತ್ ಕಟ್ಟಡ, ಸುಸಜ್ಜಿತವಾದ ಅಗ್ನಿಶಾಮಕ ಠಾಣೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ತಾಲೂಕು ನ್ಯಾಯಾಲಯ ಸ್ಥಾಪನೆ.
– ಸುಸಜ್ಜಿತ ಒಳಾಂಗಣ ಕ್ರೀಡಾಂಗಣ, ಕರಾವಳಿ ಭಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ, ಹೆಜಮಾಡಿ ತಾಲೂಕು ಕ್ರೀಡಾಂಗಣ ಮೇಲ್ದರ್ಜೆಗೇರಿಸುವುದು.
– ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ ನೀಡುವುದು, ನಗರ ಭಾಗದ ವಸತಿ ರಹಿತರಿಗೆ ವಸತಿ ಸೌಲಭ್ಯ ಹಾಗೂ ಗ್ರಾಮೀಣ ಭಾಗದ ನಿವೇಶನ ರಹಿತರಿಗೆ ನಿವೇಶನ ಸಹಿತ ವಸತಿ ಸೌಲಭ್ಯ, ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣ ಸಮುದಾಯಗಳಿಗೆ ನಿವೇಶನ ಸಹಿತ ಸಮುದಾಯ ಭವನ, ಶಿಕ್ಷಣ, ಸ್ವೋದ್ಯೋಗ ಹಾಗೂ ಇನ್ನಿತರ ಅಭಿವೃದ್ಧಿಗೆ ಚಿಂತನೆ.
– ಹುಸಿ ಒಕ್ಕಲು ಸಾಗುವಾಳಿದಾರರಿಗೆ ಪಹಣಿ ದಾಖಲಿಸಲು ಕ್ರಮ, ಪುರಸಭೆ ವ್ಯಾಪ್ತಿಯೊಳಗೆ ಬಫರ್ ಝೋನ್ ಕೈಬಿಡಲು ಒತ್ತಡ, ಆದೇಶ ಸರಳೀಕರಣ, ಅಕ್ರಮ-ಸಕ್ರಮ ಯೋಜನೆ ಜಾರಿ.
– ಹಿರಿಯಡ್ಕ ಭಾಗದಲ್ಲಿ ಸರಕಾರಿ ಜಾಗದಲ್ಲಿ ಕೈಗಾರಿಕಾ ಪ್ರದೇಶದ ಗುರುತಿಸುವಿಕೆ ಮತ್ತು ಅಭಿವೃದ್ಧಿ, ವಿವಿಧ ಕೆರೆಗಳ ಅಭಿವೃದ್ಧಿ / ಅಂತರ್ಜಲ ವೃದ್ಧಿ.
– ತಾಲೂಕು ಕೇಂದ್ರದಲ್ಲಿ ಸುಸಜ್ಜಿತವಾದ ಮಾರುಕಟ್ಟೆ ಪ್ರಾಂಗಣ, ಕಾಪು ಪೇಟೆಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಸಹಿತ ವಾಣಿಜ್ಯ ಸಂಕೀರ್ಣ ನಿರ್ಮಾಣ.
– ಪುರಸಭಾ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಸಮರ್ಪಕ ನಿರ್ವಹಣೆ, ಎಲ್ಲಾ ವಾರ್ಡ್ಗಳ ರಸ್ತೆ, ಚರಂಡಿ, ಮಳೆ ನೀರಿನ ತೋಡು, ಬೀದಿ ದೀಪ ಸಹಿತ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ಯೋಜನೆ.
– ಭೂ ಪರಿವರ್ತಿತ ನಿವೇಶನದಲ್ಲಿ ಏಕ ವಿನ್ಯಾಸಗೊಳ್ಳದ ವಸತಿ ನಿವೇಶನಕ್ಕೆ ಕಾನೂನು ಸರಳೀಕರಣ, ೮೦ ಬಡಗುಬೆಟ್ಟು ಗ್ರಾಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಽಕಾರದಿಂದ ಮಾಸ್ಟರ್ ಪ್ಲಾನ್ನಲ್ಲಿ ಗುರುತಿಸಿರುವ ಕೈಗಾರಿಕಾ ವಲಯವನ್ನು ವಸತಿ ವಲಯವನ್ನಾಗಿ ಬದಲಿಸುವುದು.
– ಸರಕಾರಿ ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆ, ಐ.ಟಿ. ಪಾರ್ಕ್ ಸ್ಥಾಪನೆ, ಜವಳಿ ಪಾರ್ಕ್ ಸ್ಥಾಪನೆ, ಪಾಲಿಟೆಕ್ನಿಕ್ ಕಾಲೇಜ್ ಮೇಲ್ದರ್ಜೆಗೇರಿಸುವುದು.
– ಧಾರ್ಮಿಕ ಕೇಂದ್ರಗಳ ನವೀಕರಣ/ಹೊಸತನ/ಕಾರಿಡಾರ್ ನಿರ್ಮಾಣ, ಕ್ಷೇತ್ರಾದ್ಯಂತ ಪ್ರವಾಸೋದ್ಯಮಕ್ಕೆ ಆದ್ಯತೆ.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಪಕ್ಷದ ನಾಯಕರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಪೇಂದ್ರ ನಾಯಕ್, ಶಿಲ್ಪಾ ಜಿ. ಸುವರ್ಣ, ಶ್ಯಾಮಲಾ ಕುಂದರ್, ಕೇಸರಿ ಯುವರಾಜ್, ಕಿರಣ್ ಆಳ್ವ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.