
ಸುತ್ತೂರು ಜಾತ್ರೆಗೆ ಸಂಭ್ರಮದ ಚಾಲನೆ
ಮೈಸೂರು: ಸುತ್ತೂರು ಕ್ಷೇತ್ರದಲ್ಲಿ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಬುಧವಾರ ಸಂಭ್ರಮದ ಚಾಲನೆ ದೊರೆಯಿತು.
ಜ.23ರವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ನಗಾರಿ ಬಾರಿಸುವ ಮೂಲಕ ವಿಧ್ಯುಕ್ತ ಚಾಲನೆ ದೊರೆಯಿತು. ಜಾತ್ರೆಯ ಮೊದಲ ದಿನ ವಸ್ತು ಪ್ರದರ್ಶನ, ಕೃಷಿ, ಸಿರಿಧಾನ್ಯ ಮೇಳ, ಸಾಂಸ್ಕೃತಿಕ ಮೇಳ, ಉಚಿತ ಆರೋಗ್ಯ ತಪಾಸಣೆ ಶಿಬಿರ, ರಂಗೋಲಿ, ದೋಣಿ ವಿಹಾರ, ಸೋಬಾನೆ ಪದ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳು ಉದ್ಘಾಟನೆಗೊಂಡವು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈವಿಜಯೇಂದ್ರ ಮಾತನಾಡಿ, ಸುತ್ತೂರು ಜಾತ್ರೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಪ್ರಖ್ಯಾತಿ ಪಡೆದಿದೆ. 12ನೇ ಶತಮಾನದಲ್ಲಿ ಬಸವಣ್ಣ ಶೋಷಿತ ಸಮುದಾಯಗಳಿಗೆ ದ್ವನಿಯಾಗಿದ್ದರು. ಹಳೇ ಮೈಸೂರಿನಲ್ಲಿ ಸುತ್ತೂರು ಮಠ ಶಿಕ್ಷಣ ಮತ್ತು ಅನ್ನ ದಾಸೋಹದ ಮಾಡುವ ಮೂಲಕ ಬಡವರ ಸೇವೆ ಮಾಡುತ್ತಿದೆ. ಜಾತ್ರೆಗಳು ಸಂಸ್ಕೃತಿಯ ರಾಯಭಾರಿಗಳಾಗಿದ್ದು, ಸುತ್ತೂರು ಜಾತ್ರೆ ಕೇವಲ ಸಾಂಸ್ಕೃತಿಕ ಉತ್ಸವವಾಗದೆ ಶ್ರದ್ಧೆಯ ಕೇಂದ್ರವಾಗಿದೆ ಎಂದರು.
ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸುತ್ತೂರು ಜಾತ್ರೆ ಇತರೆ ಜಾತ್ರೆಗಳಂತಲ್ಲ. ಕೃಷಿ, ವಿಜ್ಞಾನ, ಶಿಕ್ಷಣದ ಬಗ್ಗೆ ಜನರಿಗೆ ಅರ್ಥಪೂರ್ಣ ಮಾಹಿತಿ ನೀಡುತ್ತಾ ಬಂದಿದೆ. ರಾಜಕೀಯವಾಗಿ ಸುತ್ತೂರು ಮಠ ಯಾವುದೇ ಜಾತಿ ಅಥವಾ ಒಬ್ಬ ವ್ಯಕ್ತಿಗೆ ಸೀಮಿತವಾಗದೇ ಎಲ್ಲರನ್ನೂ ಸಮಾನವಾಗಿ ನೋಡಿದೆ ಎಂದರು.
ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಸುತ್ತೂರು ಜಾತ್ರೆ ಅನೇಕ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇಲ್ಲಿನ ಕೃಷಿ ಮೇಳದಲ್ಲಿ ಕೃಷಿ ವಿಶ್ವವಿದ್ಯಾಲಯ ಮಾಡಲಾಗದ ಕೆಲಸವನ್ನು ಸುತ್ತೂರು ಮಠ ಮಾಡಿ ತೋರಿಸಿದೆ. ಸಾವಯುವ ಕೃಷಿ ಕೇವಲ ವಸ್ತು ಪ್ರದರ್ಶನ ಕಣ್ತುಂಬಿಕೊಂಡರೆ ಸಾಲದು ಮನ ತುಂಬಿಕೊಳ್ಳಬೇಕು. ಅದನ್ನು ಜೀವನದಲ್ಲಿ ಅಳವಡಿಸಕೊಳ್ಳಬೇಕು ಎಂದರು.
ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ರಾಜ್ಯ ಸಚಿವ ನಾರಾಯಣಸ್ವಾಮಿ ಮಾತನಾಡಿ, ಜೆಎಸ್ಎಸ್ ಸಂಸ್ಥೆ ಕೇವಲ ಒಂದು ಧರ್ಮ ಅಥವಾ ಜಾತಿಗಾಗಲಿ ಸೀಮಿತವಾಗಿಲ್ಲ. ಸಮಾಜಕ್ಕೆ ಅಗತ್ಯವಾದ ಜ್ಞಾನಾರ್ಜನೆ ನೀಡುತ್ತಿದೆ. ಧಾರ್ಮಿಕ ಧರ್ಮ ಪೀಠಗಳು ಶಿಕ್ಷಣವನ್ನು ವ್ಯಾಪಾರೀಕರಣ ಮಾಡದೆ ಎಲ್ಲಾ ಸಮುದಾಯಯದ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.
ಮಾಜಿ ವಿಧಾನ ಪರಿಷತ್ ಸಭಾಪತಿ ಮರಿತ್ತಿಬ್ಬೇಗೌಡ ಮಾತನಾಡಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇರಳದ ಎಡನೀರು ಮಠದ ಸಚ್ಚಿದಾನಂದ ಭಾರತಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಹೊಸಮಠದ ಚಿದಾನಂದ ಸ್ವಾಮಿ, ಶಾಸಕ ಸಿ.ಎಸ್.ನಿರಂಜನ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ, ಕಿದ್ವಾಯಿ ಸಂಸ್ಥೆ ನಿರ್ದೇಶಕ ಡಾ.ವಿ.ಲೋಕೇಶ್, ಮರಿತಿಬ್ಬೇಗೌಡ, ಅಶೋಕ್ ಪಾಟೀಲ್ ಹಾಗೂ ಇತರರು ಹಾಜರಿದ್ದರು.