ಸುರತ್ಕಲ್ ಟೋಲ್ ಕೊನೆಗೊಳ್ಳಬೇಕೆ ಹೊರತು ವಿಲೀನವಲ್ಲ!!

Spread the love

ಸುರತ್ಕಲ್ ಟೋಲ್ ಕೊನೆಗೊಳ್ಳಬೇಕೆ ಹೊರತು ವಿಲೀನವಲ್ಲ!!

ಅಂತೂ ಇಂತೂ ಸುರತ್ಕಲ್ ಟೋಲ್ ನಿಂದ ಜನತೆಗೆ ಮುಕ್ತಿ ದೊರಕುವ ಲಕ್ಷಣಗಳು ಸ್ಪಷ್ಟವಾಗಿ ಗೋಚವಾಗತೊಡಗಿವೆ. ಮೊನ್ನೆ ನೆಡೆದ ಪ್ರತಿಭಟನೆ ಕಾವು ಆಡಳಿತಕ್ಕೆ ತಟ್ಟಿದೆ. ಇದನ್ನು ತೆಗೆಯುತ್ತೇವೆ ಅಂತಾನೂ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಯಾವಾಗ ಅಂತ ಹೇಳಿಲ್ಲ. ಮೇಲ್ನೋಟಕ್ಕೆ ಒಂದು ಹತ್ತು ಹದಿನೈದು ದಿನ ಅಂತ ಎಂದಿನಂತೆ ಹೇಳಿದಾರೆ. ಇದು ಮೂಗಿಗೆ ತುಪ್ಪ ಸವರುವ ಹುನ್ನಾರವೋ ಅಥವಾ ಸತ್ಯವಾಗಿ ಹೇಳಿದ್ದೋ ಇನ್ನು ಹದಿನೈದು ದಿನಗಳಲ್ಲಿ ಗೊತ್ತಾಗಲಿದೆ. ಈ ಬಾರಿ ಮತ್ತೆ ಅದನ್ನು ಮುಂದುವರೆಸಿದರೆ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಖಂಡಿತ ಪಾಠಕಲಿಸುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಹೋರಾಟ ಮಾಡಬೇಕಿರಲಿಲ್ಲ. ಇದೊಂದು ದೋಷಪೂರಿತ ಶುಲ್ಕ ಸಂಗ್ರಹ ಕೇಂದ್ರವೆಂದು ತಿಳಿದ ಬಳಿಕ ಜನಪ್ರತಿನಿಧಿಗಳು ಅಧಿಕಾರಿಗಳನ್ನು‌ಕರೆದು ಆದ ಲೋಪವನ್ನು ಸರಿಪಡಿಸುವಂತೆ ಸ್ಪಷ್ಟವಾಗಿ ನಿಖರವಾಗಿ ಹೇಳಬೇಕಿತ್ತು. ಹಾಗಾಗದಿರು ವುದರಿಂದಲೇ ಜನತೆ ಈ ಹೋರಾಟಕ್ಕಿಳಿ ಯಬೇಕಾಗಿ ಬಂದಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ. ರಾಜಕಾರಣಿ ಭ್ರಷ್ಟನಾದರೆ, ಆಲಸಿಯಾದರೆ, ಲಂಚಕೋರನಾದರೆ, ಸ್ವಜನಪಕ್ಷಪಾತಿಯಾದರೆ, ಅಂಜಬುರುಕನಾದರೆ, ನಿಷ್ಕ್ರಿಯ ನಾದರೆ ಇಂತಹ ವಿಷಯಗಳಲ್ಲಿ‌ ಸಾರ್ವಜನಿಕರು ಹೋರಾಟಮಾಡದೆ ವಿಧಿಯಿಲ್ಲ.

ನಾನು ಕಳೆದ ನವೆಂಬರ್ ತಿಂಗಳಲ್ಲಿ ಅಂದ್ರೆ ಸುಮಾರು ಒಂದು ವರ್ಷದ ಹಿಂದೆ ಟೋಲ್ ಕುರಿತಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪತ್ರ ಬರೆದು ವಿವರ ಕೋರಿದ್ದೆ. ಅದು ಬಂದ ಬಳಿಕ ಅಂದರೆ ಸುಮಾರು ಹತ್ತು ತಿಂಗಳ ಹಿಂದೆ “ಸಾರ್ವಜನಿಕರನ್ನು ಲೂಟುತ್ತಿರುವ ಸುರತ್ಕಲ್ ಟೋಲ್” ಎಂಬ ಲೇಖನ ಬರೆದೆ.

ಈ ಲೇಖನವನ್ನು ಸಾವಿರಾರು ಜನ ಓದಿ ಪ್ರತಿಕ್ರಿಯಿಸಿದ್ದರು. ಇದೊಂದು ನಿಯಮಬಾಹಿರ ಶುಲ್ಕ ವಸೂಲಾತಿ ಕೇಂದ್ರ ಎಂದು ಸಾರ್ವಜನಿಕರಿಗೆ ಮನದಟ್ಟಾಗಲು ಶುರುವಾಯಿತು. ಅರವತ್ತು ಕಿಲೋ ಮೀಟರ್ ಗೆ ಶುಲ್ಕ ಸಂಗ್ರಹ ಮಾಡಬೇಕೆಂಬ ನಿಯಮವನ್ನು ಇಲ್ಲಿ ಮೀರಲಾಗಿದೆ ಎಂದು ಸ್ಪಷ್ಟವಾಗಿ ಜನರು ಮಾತನಾಡಲಾರಂಭಿಸಿದರು. ಪತ್ರಿಕೆಗಳು ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಚರ್ಚೆ ಶುರುವಾಯಿತು. ಅಂದಿನಿಂದ ಟೋಲ್ ಕುರಿತು ಅಲ್ಲಲ್ಲಿ ಬಿಸಿಬಿಸಿ ಚರ್ಚೆಗಳಾಗತೊಡಗಿದವು. ಟೋಲ್ ವಿರೋಧಿ ಸಮಿತಿಯಿಂದ ಇದಕ್ಕೆ ಮತ್ತಷ್ಟು ವೇಗ ದೊರಕಿತು. ಮಾನ್ಯ ಕೇಂದ್ರ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರೇ ಮಂಗಳೂರಿಗೆ ಬಂದಾಗ ಈ ವಿಷಯದ ಬಗ್ಗೆ ಸಾರ್ವಜನಿಕ ಸಭೆಯಲ್ಲಿಯೇ ಸುರತ್ಕಲ್ ಟೋಲ್ ಗೇಟನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದರು. ಅದರಂತೆ ಲೋಕಸಭೆಯಲ್ಲೂ ದೇಶಾದ್ಯಂತ ಅರವತ್ತು ಕಿಲೋಮೀಟರ್ ಕಿಂತ ಕಡಿಮೆ ದೂರವಿರುವ ಎಲ್ಲ ಟೋಲ್‌ಗೇಟಗಳನ್ನು ಇನ್ನು ತೊಂಬತ್ತು ದಿನಗಳಲ್ಲಿ ನಿಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲಿಗೆ ಒಂದು ಹಂತಕ್ಕೆ ಸುರತ್ಕಲ್ ಟೋಲ್ ಗೆ ಮುಕ್ತಿ ದೊರೆಯುವ ಕಾರ್ಯಕ್ಕೆ ಜಯಸಿಕ್ಕಂತಾಯಿತು.

ಟೋಲ್ ಗೇಟ್ ತೆರವು ಆಗುವುದು ನಿಶ್ಚಿತ. ಆದರೆ ಇದೀಗ ಹೆಜಮಾಡಿ ಶುಲ್ಕ ಸಂಗ್ರಹ ಕೇಂದ್ರದಲ್ಲಿ ವಿಲೀನ ಎಂಬ ಹೊಸ ಬಾಣವನ್ನು ತೇಲಿಬಿಟ್ಟಿದ್ದಾರೆ. ಹೀಗೇನಾದ್ರೂ ಆದರೆ ಮಂಗಳೂರಿನವರವರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುವುದು ನಿಶ್ಚಿತ. ಈಗ ಕೆ ಎ 19 ವಾಹನಗಳಿಗೆ ಸುರತ್ಕಲ್ ನಲ್ಲಿ ಟೋಲ್ ಮುಕ್ತ ಸಂಚಾರವಿದೆ. ಇದನ್ನು ವಿಲೀನ ಮಾಡಿದರೆ ಮಂಗಳೂರಿನ ಜನರಿಗೆ ಹೆಚ್ಚಿನ ಹೊರೆ ಬೀಳಲಿದೆ. ಯಾವುದೇ ಕಾರಣಕ್ಕೂ ಹೆಜಮಾಡಿಯಲ್ಲಿ ಶುಲ್ಕ ಹೆಚ್ಚಳವಾಗುವುದಕ್ಕೆ ಅವಕಾಶಕೊಡಕೂಡದು. ಇಂತಹ ದುಸ್ಸಾಹಸಕ್ಕೆ ಆಡಳಿತ ಪಕ್ಷ ಕೈಹಾಕಿದರೆ ಮುಂಬರುವ ಅದರ ಫಲವನ್ನು ಅವರು ಅನುಭವಿಸುವುದು ಖಂಡಿತ. ಏನೇ ಆಗಲಿ ಇದೊಂದು ಜನರ ಹೋರಾಟವಾಗಿ ರೂಪುಗೊಂಡಿರುವುದು ಉತ್ತಮ ಲಕ್ಷಣ. ಇದೇ ತರಹ ಜನಜಾಗೃತಿ ಉಂಟಾದರೆ ರಾಜಕಾರಣಿಗಳೂ ನಮ್ಮ ಜಿಲ್ಲೆಯಲ್ಲಿ ಜಾಗೃತರಾಗಿ ಜನಪರ ಕಾರ್ಯ ಮಾಡುವುದರಲ್ಲಿ ಸಂಶಯವಿಲ್ಲ.ಹಾಗಾದಾಗ ಮಾತ್ರ ಪ್ರಜ್ಞಾವಂತ ಜಿಲ್ಲೆಯ ಜನ ಎಂಬ ಹೆಸರಿಗೆ ಸ್ವಲ್ಪವಾದರೂ ಅರ್ಥಬರುತ್ತದೆ.

ದಿಲ್ ರಾಜ್ ಆಳ್ವ


Spread the love