ಸುರತ್ಕಲ್‌ ಟೋಲ್‌ ಗೇಟ್‌ ತೆರವಿಗೆ ಯತ್ನ; ಹೋರಾಟಗಾರರ ಬಂಧನ

Spread the love

ಸುರತ್ಕಲ್‌ ಟೋಲ್‌ ಗೇಟ್‌ ತೆರವಿಗೆ ಯತ್ನ; ಹೋರಾಟಗಾರರ ಬಂಧನ
 
ಮಂಗಳೂರು: ಸುರತ್ಕಲ್‌ ಎನ್‌ಐಟಿಕೆ ಬಳಿಯ ಟೋಲ್‌ ಗೇಟ್‌ ತೆರವಿಗೆ ಯತ್ನಿಸಿದ ಹೋರಾಟಗಾರರನ್ನು ಪೊಲೀಸರು ಬಂಧಿಸಿ, ಕರೆದೊಯ್ದರು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಈ ಟೋಲ್‌ ಅನಧಿಕೃತವಾಗಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಹೋರಾಟಗಾರರು ಒತ್ತಾಯಿಸುತ್ತಲೇ ಬಂದಿದ್ದಾರೆ.

ಸರ್ಕಾರ ತೆಗೆದುಕೊಂಡಿದ್ದ ಅವಧಿ ಮುಗಿದಿದ್ದರಿಂದ ಇದೇ 18ರಂದು ತಾವೇ ಟೋಲ್‌ಗೇಟ್‌ ತೆರವುಗೊಳಿಸುವುದಾಗಿ ಹೋರಾಟಗಾರರು ಬೆದರಿಕೆ ಹಾಕಿದ್ದರು.

ಏತನ್ಮಧ್ಯೆ, ಪೊಲೀಸರು ಹೋರಾಟಗಾರರಿಗೆ ರಾತ್ರಿ ನೋಟಿಸ್‌ ಜಾರಿ ಮಾಡಿದ್ದರು. ಪೊಲೀಸರ ಈ ಕ್ರಮ ವಿರೋಧಿಸಿ ಪ್ರತಿಭಟನೆಯೂ ನಡೆದಿದ್ದವು.

ಪೂರ್ವನಿಗದಿಯಂತೆ ಹೋರಾಟಗಾರರು ಮಂಗಳವಾರ ಈ ಟೋಲ್‌ ಗೇಟ್‌ಗೆ ಮುತ್ತಿಗೆ ಹಾಕಿ, ತೆರವುಗೊಳಿಸಲು ಯತ್ನಿಸಿದರು. ಟೋಲ್‌ಗೇಟ್‌ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಅವರನ್ನು ಬಂಧಿಸಿದರು.

ಉಡುಪಿ-ಮಂಗಳೂರು ಮಧ್ಯದ ಈ ಹೆದ್ದಾರಿಯಲ್ಲಿ ಹೆಜಮಾಡಿ ಟೋಲ್ ಆರಂಭವಾಗುವವರೆಗೂ ತಾತ್ಕಾಲಿಕವಾಗಿ ಟೋಲ್ ಸಂಗ್ರಹ ಮಾಡಲು 2015ರಲ್ಲಿ ಸುರತ್ಕಲ್ ಟೋಲ್ ಕೇಂದ್ರ ಆರಂಭಿಸಲಾಯಿತು.

2016ರಲ್ಲಿ ಹೆಜಮಾಡಿ ಟೋಲ್ ಕೇಂದ್ರ ಆರಂಭವಾದರೂ ಸುರತ್ಕಲ್ ಟೋಲ್ ಬಂದ್ ಮಾಡಲಿಲ್ಲ. 6 ವರ್ಷಗಳಲ್ಲಿ ₹ 400 ಕೋಟಿ ಟೋಲ್ ಸಂಗ್ರಹಿಸಲಾಗಿದೆ. ಅನಧಿಕೃತ ಟೋಲ್ ಕೇಂದ್ರ ಮುಚ್ಚುವಂತೆ ಹೋರಾಟ, ಪ್ರತಿಭಟನೆ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.


Spread the love