ಸುರತ್ಕಲ್ ಟೋಲ್ ಗೇಟ್ ರದ್ದು: ಶೀಘ್ರವೇ ವಿಶೇಷ ಸಭೆ ಕರೆಯಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆದೇಶ

Spread the love

ಸುರತ್ಕಲ್ ಟೋಲ್ ಗೇಟ್ ರದ್ದು: ಶೀಘ್ರವೇ ವಿಶೇಷ ಸಭೆ ಕರೆಯಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆದೇಶ

ಮಂಗಳೂರು: ಮಂಗಳೂರು-ಉಡುಪಿಯನ್ನು ಹೆದ್ದಾರಿ ಮಧ್ಯೆ ಬರುವ ಸುರತ್ಕಲ್ ಟೋಲ್ ಗೇಟ್‌ನ್ನು ರದ್ದುಪಡಿಸುವ ಬಗ್ಗೆ ಶೀಘ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿಶೇಷ ಸಭೆ ಕರೆಯಲು ಆದೇಶಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.

ಹೊಸದಿಲ್ಲಿಯ ಕೇಂದ್ರ ಸಚಿವರ ನಿವಾಸದಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ‌ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಜ್ಯ ಸಂಸದರ ಸಭೆ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ರಾಜ್ಯದ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು. ಈ ವೇಳೆ ಕೇಂದ್ರ ಸಚಿವರ ಹಲವು ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್-ಅಡ್ಡಹೊಳೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 169 ಸಣ್ಣೂರು- ಬಿಕರ್ನಕಟ್ಟೆ ರಸ್ತೆ ಚತುಷ್ಪಥ ಕಾಮಗಾರಿಗೆ ಈಗಾಗಲೇ ಟೆಂಡರ್ ಪೂರ್ಣಗೊಂಡಿದೆ. ಭಾರತ್ ಮಾಲಾ ಯೋಜನೆಯಡಿ ದ್ವಿಪಥ ರಸ್ತೆಯಾಗಿರುವ ಮುಲ್ಕಿ- ಕಟೀಲು- ಕೈಕಂಬ- ಪೊಳಲಿ- ಬಿ.ಸಿ.ರೋಡು- ಪಾಣೆಮಂಗಳೂರು- ತೊಕ್ಕೊಟ್ಟು ಸಂಪರ್ಕಿಸುವ ಮಂಗಳೂರು ನಗರ ಹೊರವರ್ತುಲ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಶೀಘ್ರ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.

ಮಂಗಳೂರು- ಬೆಂಗಳೂರು ಸಂಪರ್ಕಿಸಲು ಪರ್ಯಾಯ ರಸ್ತೆಯಾದ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯನ್ನು ಮಾಣಿಯಿಂದ ಕುಶಾಲನಗರ ದವರೆಗೆ ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಪರಿಗಣಿಸುವುದಾಗಿ ಸಂಸದ ನಳಿನ್ ‌ಕುಮಾರ್ ಕಟೀಲ್ ಅವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.

ಸಭೆಯಲ್ಲಿ ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಉಪಸ್ಥಿತರಿದ್ದರು.


Spread the love