ಸುರತ್ಕಲ್: ಸ್ನೇಹಿತರ ನಡುವೆ ಜಗಳ, ಯುವಕನಿಗೆ ಚೂರಿ ಇರಿತ
ಸುರತ್ಕಲ್: ಸ್ನೇಹಿತರ ನಡುವೆ ಜಗಳ ನಡೆದು ಓರ್ವನಿಗೆ ಚೂರಿ ಇರಿದಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿ ಶುಕ್ರವಾರ ತಡರಾತ್ರಿ ವರದಿಯಾಗಿದೆ.
ಚೂರಿ ಇರಿತಕ್ಕೊಳಗಾದವರನ್ನು ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ಐಮಾನ್ (18) ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಆತನ ಸ್ನೇಹಿತರಾದ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಶಾಹಿಲ್, 6ನೇ ಬ್ಲಾಕ್ ನಿವಾಸಿ ಉನೀಸ್ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕನೋರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಐಮಾನ್ ನ ಭುಜಕ್ಕೆ ಚೂರಿ ಇರಿತದ ಗಾಯವಾಗಿದ್ದು, ನಗರದ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಚೂರಿ ಇರಿತಕ್ಕೊಳಗಾಗಿರುವ ಐಮಾನ್ ತನ್ನ ಸ್ನೇಹಿತನಾಗಿರುವ ಶಾಹಿಲ್ ಕೈನಿಂದ 5ಸಾವಿರ ರೂ. ಸಾಲ ಪಡೆದುಕೊಂಡಿದ್ದ ಎನ್ನಲಾಗಿದೆ. ಸಾಲಕ್ಕೆ ಬದಲಾಗಿ ಐಮಾನ್ ಆತನಿಗೆ ತನ್ನ ಬೈಕ್ ನೀಡಿದ್ದ ಎನ್ನಲಾಗಿದೆ. ತನ್ನ ಶಾಲೆಗೆ ಸಮವಸ್ತ್ರ ಖರೀದಿಸಲೆಂದು ತೆಗಿದಿಟ್ಟಿದ್ದ ಹಣ ಹಿಂದಿರುಗಿಸುವಂತೆ ಹಲವು ಬಾರಿ ಕೇಳಿಕೊಂಡರೂ ಐಮಾನ್ ಹಣ ನೀಡಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರವಾಗಿ ಸ್ನೇಹಿತರು ಐಮಾನ್ ನನ್ನು ನಿನ್ನೆರಾತ್ರಿ ಚೊಕ್ಕಬೆಟ್ಟುಗೆ ಕರೆಸಿಕೊಂಡಿದ್ದರು. ಬಳಿಕ ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಆಕ್ರೋಶಿತನಾದ ಸಾಹಿಲ್ ತನ್ನಲ್ಲಿದ್ದ ಚೂರಿಯಿಂದ ಐಮಾನ್ ಗೆ ಚುಚ್ಚಿದ್ದಾನೆ ಎನ್ನಲಾಗಿದೆ.
ಘಟನೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಉಪ ನಿರೀಕ್ಷ ರಘು ನಾಯಕ್ ನೇತೃತ್ವದ ಪೊಲೀಸ್ ತಂಡ ಮೂವರು ಆರೋಪಿಗಳನ್ನು ಬಂಧಿಸಿದ್ದು, ರವಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.