ಸುಲಿಗೆ ಪ್ರಕರಣ – ನಾಲ್ವರು ರೌಡಿ ಶೀಟರ್ ಗಳ ಬಂಧನ

Spread the love

ಸುಲಿಗೆ ಪ್ರಕರಣ – ನಾಲ್ವರು ರೌಡಿ ಶೀಟರ್ ಗಳ ಬಂಧನ

ಮಂಗಳೂರು : ನಗರದ ಎರಡು ಕಡೆಗಳಲ್ಲಿ 2 ದ್ವಿಚಕ್ರ ವಾಹನಗಳ ಸಹಿತ ಸವಾರರನ್ನು ಸುಲಿಗೆಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನಗರದ ಕುಲಶೇಖರದ ದೀಕ್ಷಿತ್ ಯಾನೆ ದೀಕ್ಷು ಕುಂಡಕೋರಿ ಯಾನೆ ದೀಕ್ಷಿತ್ ಪೂಜಾರಿ (32), ಸೋಮೇಶ್ವರದ ಚಂದ್ರ ಯಾನೆ ಚಂದ್ರಹಾಸ ಪೂಜಾರಿ (34), ಕೋಟೆಕಾರ್ನ ಪ್ರಜ್ವಲ್ ಯಾನೆ ಹೇಮಚಂದ್ರ, ಸುರತ್ಕಲ್ ಚೇಳಾರಿನ ಸಂತೋಷ್ ಪೂಜಾರಿ ಯಾನೆ ನಾಯಿ ಸಂತು (38) ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಬಂಧಿತರೆಲ್ಲರೂ ರೌಡಿ ಶೀಟರ್ ಗಳು ಆಗಿದ್ದು ಇವರ ಮೇಲೆ ಬೇರೆ ಬೇರೆ ಠಾಣೆಗಳಲ್ಲಿ ರೌಡಿಶೀಟ್ ತೆರೆಯಲಾಗಿದೆ. ಸಮಾಜಘಾತುಕ ಶಕ್ತಿಗಳಾಗಿರುವ ಈ ನಾಲ್ವರು ಆರೋಪಿಗಳಲ್ಲದೆ ಇನ್ನೂ 8 ಮಂದಿ ಇದ್ದು, ಅವರ ಬಂಧನಕ್ಕೆ ಪ್ರಯತ್ನ ನಡೆದಿದೆ ಎಂದರು.

ದರೋಡೆ, ಕಳ್ಳತನ, ಸುಲಿಗೆ ಮೂಲಕ ಮೊದಲು ಹಣ ಗಳಿಸುವುದು ಮತ್ತು ಬಳಿಕ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಗಳ ಕೊಲೆ ಮಾಡುವುದು ಹಾಗೂ ಮಂಗಳೂರಿನ ಕ್ರಿಮಿನಲ್ ಚಟುವಟಿಕೆಯ ಮೇಲೆ ನಿಯಂತ್ರಣ ಸಾಧಿಸುವುದು ಬಂಧಿತರ ಆರೋಪಿಗಳ ಯೋಜನೆಯಾಗಿತ್ತು. ಇವರನ್ನು ಮಂಗಳೂರು ದಕ್ಷಿಣ ಉಪವಿಭಾಗದ ಪೊಲೀಸ್ ಮತ್ತು ಸಿಸಿಬಿ ಪೊಲೀಸ್ ತಂಡ ನಾಲ್ವರನ್ನು ಬಂಧಿಸಿ ಬಹುದೊಡ್ಡ ಅನಾಹುತ ತಪ್ಪಿಸಿದ್ದಾರೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇವರು ಮರಳು, ಗಾಂಜಾ ದಂಧೆಯಲ್ಲೂ ಭಾಗಿಯಾಗಿದ್ದರು. ಭೂಗತ ಪಾತಕಿ ರವಿ ಪೂಜಾರಿ ಹಾಗೂ ಕ್ರಿಮಿನಲ್ಗಳ ಜೊತೆ ನಿಕಟ ಸಂಪರ್ಕದಲ್ಲಿದ್ದ ಇವರು ತಮ್ಮದೇ ಆದ ರೌಡಿ ಗ್ಯಾಂಗ್ ಕಟ್ಟಲು ಸಿದ್ಧತೆ ನಡೆಸಿದ್ದರು.  ಸುಲಿಗೆಗೈದ ಎರಡು ದ್ವಿಚಕ್ರ ವಾಹನ, ನಗದು, ಮೊಬೈಲ್ ಫೋನ್, ಮಾರಕಾಸ್ತ್ರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.


Spread the love