ಸುಳ್ಳು ಕೇಸುಗಳನ್ನು ಹಾಕಿದ್ದರೆ ಸಾಬೀತು ಮಾಡುವುದು ಯಾರು? – ಸಚಿವ ಕೋಟಗೆ ವೆರೋನಿಕಾ ಕರ್ನೆಲಿಯೊ ಪ್ರಶ್ನೆ

Spread the love

ಸುಳ್ಳು ಕೇಸುಗಳನ್ನು ಹಾಕಿದ್ದರೆ ಸಾಬೀತು ಮಾಡುವುದು ಯಾರು? – ಸಚಿವ ಕೋಟಗೆ ವೆರೋನಿಕಾ ಕರ್ನೆಲಿಯೊ ಪ್ರಶ್ನೆ

ಉಡುಪಿ: ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಕೇಸಗಳನ್ನು ಹಾಕಿದ ಅಧಿಕಾರಿಗಳನ್ನು ಮೊದಲು ವಜಾ ಮಾಡುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಗೃಹ ಸಚಿವರನ್ನು ಆಗ್ರಹಿಸಲಿ ಬಳಿಕ ಕೇಸು ಹಿಂತೆಗೆದುಕೊಳ್ಳುವ ಬಗ್ಗೆ ಚಿಂತಿಸಲಿ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೋ ಹೇಳಿದ್ದಾರೆ.

ಇವರದ್ದೇ ಬಿಜೆಪಿ ಸರಕಾರ ಇರುವಾಗ ಹಿಂದೂ ಕಾರ್ಯಕರ್ತರ ಮೇಲೆ ಯಾಕೆ ಸುಳ್ಳು ಕೇಸುಗಳನ್ನು ಹಾಕಲಾಗಿದೆ ಮತ್ತು ಅಧಿಕಾರಿಗಳು ಕೇವಲ ಅವರ ಕಾರ್ಯಕರ್ತರುಗಳ ಮೇಲೆ ಮಾತ್ರ ಯಾಕೆ ಸುಳ್ಳು ಕೇಸುಗಳನ್ನು ಹಾಕುತ್ತಾರೆ. ಅಧಿಕಾರಿಗಳು ಸುಳ್ಳು ಕೇಸುಗಳನ್ನು ಹಾಕಿದ್ದರೆ ಅದನ್ನು ಸಾಬೀತು ಪಡಿಸುವುದು ಯಾರು ಎಂದು ಅವರು ಪ್ರಶ್ನಿಸಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಾಮಾಜಿಕ ನ್ಯಾಯಕ್ಕೆ ಹೆಸರಾದವರು ಎಂದು ಹೇಳಿ ಈಗ ಅವರ ಕಾರ್ಯಕರ್ತರ ಮೇಲಿನ ಸುಳ್ಳು ಕೇಸುಗಳನ್ನು ಮಾತ್ರ ತೆಗೆಯಲು ಹೇಳುತ್ತಿರುವುದು ಯಾವ ರೀತಿಯ ಸಾಮಾಜಿಕ ನ್ಯಾಯವಾಗಿದೆ. ಒಂದು ವೇಳೆ ಸುಳ್ಳು ಕೇಸುಗಳು ಹಾಕಿದ್ದಲ್ಲಿ ಎಲ್ಲರ ಮೇಲಿನ ಕೇಸು ವಾಪಾಸು ಪಡೆಯಬೇಕಲ್ಲವೇ ಆಗ ಪೂಜಾರಿಯವರ ಸಾಮಾಜಿಕ ನ್ಯಾಯಕ್ಕೆ ನಿಜವಾದ ಅರ್ಥ ಬರುತ್ತದೆ.

ಒಂದು ಕಡೆಯಿಂದ ಸಚಿವ ಈಶ್ವರಪ್ಪ ತನಗೆ ಹೊಡೆದವರಿಗೆ ವಾಪಾಸು ಹೊಡೆಯಿರಿ ಎಂಬ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ ಇನ್ನೊಂದೆಡೆ ಸಚಿವ ಕೋಟ ತನ್ನ ಕಾರ್ಯಕರ್ತರ ಮೇಲಿನ ಕೇಸುಗಳನ್ನು ವಾಪಾಸು ಪಡೆಯಿರಿ ಎನ್ನುತ್ತಾರೆ ಇದನ್ನು ನೋಡುವಾಗ ರಾಜ್ಯದಲ್ಲಿ ಅರಾಜಕತೆ, ಗೊಂದಲವನ್ನು ಉಂಟು ಮಾಡಲು ಹೊರಟಿರುವುದನ್ನು ತೋರಿಸುತ್ತದೆ. ಇವರದ್ದೇ ಪಕ್ಷದ ಕಾರ್ಯಕರ್ತ ಉದಯ್ ಗಾಣಿಗನನ್ನು ಬಿಜೆಪಿ ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದವರೇ ಸೇರಿಕೊಂಡು ಕೊಲೆ ಮಾಡಿದಾಗ ಯಾಕೆ ಸಚಿವ ಶ್ರೀನಿವಾಸ ಪೂಜಾರಿ ಮತ್ತು ಈಶ್ವರಪ್ಪ ಮೌನವಾಗಿದ್ದರು ಆಗ ಅವರಿಗೆ ಸಾಮಾಜಿಕ ನ್ಯಾಯದ ನೆನಪು ಆಗಿಲ್ಲವೇ? ಒಟ್ಟಾರೆ ಸಚಿವರ ಕೇವಲ ನಾಟಕೀಯ ವರ್ತನೆಗೆ ಸೀಮಿತವಾಗಿದ್ದಾರೆಯೇ ಹೊರತು ಜನರ ಬಗೆಗೆ ನೈಜ ಕಾಳಜಿಯನ್ನು ಮರೆತಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love