ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸುವುದು ಜನಪರ ಆಡಳಿತವೇ? – ತಾಪಂ ಸದಸ್ಯ ಧನಂಜಯ ಕುಂದರ್

Spread the love

ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸುವುದು ಜನಪರ ಆಡಳಿತವೇ? – ತಾಪಂ ಸದಸ್ಯ ಧನಂಜಯ ಕುಂದರ್

ಉಡುಪಿ: ಮುಖ್ಯ ರಸ್ತೆಗೆ ಮುಖ ಮಾಡಿಕೊಂಡು ಜನರಿಗೆ ಅನುಕೂಲಕರವಾಗಿದ್ದ ಮುಖ್ಯದ್ವಾರವನ್ನು ಮುಚ್ಚಿ ಒಂದು ಮೂಲೆಯಲ್ಲಿ ತೆರೆದಿರುವುದು, ಜನರಿಂದ ಆಯ್ಕೆಯಾದ ಸದಸ್ಯರ ಮೇಲೆ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸುವುದು ಜನಪರ ಆಡಳಿತವೇ ಎಂದು ತಾಲೂಕು ಪಂಚಾಯತ್ ಸದಸ್ಯ ಧನಂಜಯ್ ಕುಂದರ್ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಅವರಿಗೆ ಪ್ರಶ್ನಿಸಿದ್ದಾರೆ.

ಚುನಾಯಿತ ಪಂಚಾಯತ್ ಸದಸ್ಯರ ಗಮನಕ್ಕೂ ತಾರದೇ ಗುಟ್ಟಾಗಿ ಗ್ರಾಮ ಪಂಚಾಯತ್ ನ ಮುಖ್ಯದ್ವಾರವನ್ನು ಬದಲಾಯಿಸಿದ್ದನ್ನು ಪ್ರಜಾಪ್ರಭುತ್ವದ ಆದಾರದಲ್ಲಿಯೇ ಪ್ರತಿಭಟನೆ ಮೂಲಕ ಅಧ್ಯಕ್ಷರಲ್ಲಿ ಪ್ರಶ್ನಿಸಿದ್ದು ಅಪರಾಧವೆಂಬಂತೆ ಸದಸ್ಯರು ಹಾಗೂ ಗ್ರಾಮಸ್ಥರ ಮೇಲೆ ಪಂಚಾಯತ್ ಅಧ್ಯಕ್ಷರು ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದು ಖಂಡನೀಯ.

ತೆಂಕನಿಡಿಯೂರು ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಸರಕಾರಿ ಕಟ್ಟಡವಾದ ಪಂಚಾಯತ್ ನ ಮುಖ್ಯ ದ್ವಾರ ಮುಚ್ಚಿ ಹಿಂಬದಿಯಿಂದ ಕಳ್ಳ ದಾರಿಯ ಹಾಗೂ ಮಾಡುವ ಬಗ್ಗೆ ಚರ್ಚೆ ಹಾಗೂ ಸರ್ವ ಸದಸ್ಯರ ನಿರ್ಣಯ ಕೈಗೊಳ್ಳದೆ ಸರ್ವಾಧಿಕಾರ ಪ್ರದರ್ಶಿಸಿದ ಬಗ್ಗೆ ಬಿಜೆಪಿ ನಾಯಕರಿಗೆ ತಿಳಿಯದಿರುವುದು ಹಾಸ್ಯಾಸ್ಪದ. ಗ್ರಾಮದ ಸಾರ್ವಜನಿಕರು ಗೌರವಾನ್ವಿತರು ಹಾಗೂ ಶಾಂತಿ ಪ್ರಿಯರಾಗಿದ್ದು, ಸಾರ್ವಜನಿಕರಲ್ಲಿ ಹುಳಿ ಹಿಂಡುವ ಕೆಲಸಕ್ಕೆ ಕೈ ಹಾಕಬಾರದು ಎಂದು ಅವರು ಬಿಜೆಪಿ ನಾಯಕರಿಗೆ ಎಚ್ಚರಿಸಿದ್ದಾರೆ.

ಪಂಚಾಯತ್ ಆಡಳಿತ ಪಾರದರ್ಶಕವಾಗಿರಬೇಕು ಎಂಬುದು ನಮ್ಮ ವಾದವಾಗಿದ್ದು ಕಳೆದ 6 ವರ್ಷಗಳಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಆಡಳಿತದಲ್ಲಿ ಅಭಿವೃದ್ಧಿ ಎಂಬದು ಯಾವುದೇ ಆಗಿಲ್ಲ. ತೆಂಕನಿಡಿಯೂರು ಗ್ರಾಮ ಪಂಚಾಯತ್ ಆಡಳಿತದಲ್ಲಿ ಸ್ಥಳೀಯರಲ್ಲದ ನಗರ ಬಿಜೆಪಿ ಅಧ್ಯಕ್ಷರ ಮೂಗು ತೂರಿಸುವಿಕೆ ಅಗತ್ಯವಿಲ್ಲ ಸ್ಥಳೀಯ ವಿಚಾರವನ್ನು ಸ್ಥಳೀಯರು ಕಾನೂನಾತ್ಮಕವಾಗಿ ಬಗೆ ಹರಿಸಿಕೊಳ್ಳುತ್ತೇವೆ ಇದಕ್ಕೆ ಹೊರಗಿನವರ ಸಲಹೆ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.


Spread the love