
ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪ; ವಾಹಿನಿ ಕಚೇರಿ ಮೇಲೆ ಎಸ್‌ಎಫ್‌ಐ ದಾಳಿ
ಕೊಚ್ಚಿ: ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಮಲಯಾಳಂ ಸುದ್ದಿ ವಾಹಿನಿ ಏಷ್ಯಾನೆಟ್ ನ್ಯೂಸ್ ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ಆರೋಪಿಸಿ ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಕಾರ್ಯಕರ್ತರ ಗುಂಪೊಂದು ಕಚೇರಿಗೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿದ್ದಾರೆ.
ಕೇರಳದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ-ಎಂ) ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐನ ಸುಮಾರು 30 ಕಾರ್ಯಕರ್ತರ ವಿರುದ್ಧ ಟಿವಿ ಚಾನೆಲ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಕಚೇರಿಗೆ ನುಗ್ಗಿದ ಎಸ್‌ಎಫ್‌ಐ ಕಾರ್ಯಕರ್ತರು ಭದ್ರತಾ ಸಿಬ್ಬಂದಿಯನ್ನು ಪಕ್ಕಕ್ಕೆ ತಳ್ಳಿ ಸುದ್ದಿವಾಹಿನಿಯ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಅದರ ನೌಕರರನ್ನು ಬೆದರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯದ ಶಾಲೆಯೊಂದರಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಅಪ್ರಾಪ್ತ ಬಾಲಕಿಯನ್ನು ಬಳಸಿಕೊಂಡು ಸುಳ್ಳು ಸುದ್ದಿ ಸೃಷ್ಟಿಸಿದೆ ಎಂಬ ಆರೋಪದ ಮೇಲೆ ಸುದ್ದಿ ವಾಹಿನಿಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸಿಪಿಐ-ಎಂ ಮೂಲಗಳು ಶನಿವಾರ ತಿಳಿಸಿದೆ.
ನಕಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಮಾಧ್ಯಮ ಸಂಸ್ಥೆಯ ವಿರುದ್ಧ ಕೊಚ್ಚಿ ಕಚೇರಿಯವರೆಗೆ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ಎಸ್‌ಎಫ್‌ಐ ಎರ್ನಾಕುಲಂ ಜಿಲ್ಲಾ ಸಮಿತಿಯ ಮೂಲಗಳು ತಿಳಿಸಿವೆ. ಈ ಮೂಲಕ ಸಂಘಟನೆಯ ನಡೆಯನ್ನು ಸಮರ್ಥಿಸಿಕೊಂಡಿವೆ.
ಕಾರ್ಯಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಎಫ್‌ಐ ಕ್ರಮವನ್ನು ಟೀಕಿಸಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲು ಕೇರಳ ಸರ್ಕಾರವನ್ನು ಒತ್ತಾಯಿಸಿದೆ.
‘ಎಸ್‌ಎಫ್‌ಐ ಕಾರ್ಯಕರ್ತರು ಎರ್ನಾಕುಲಂನಲ್ಲಿರುವ ಏಷ್ಯಾನೆಟ್ ನ್ಯೂಸ್ ಕಚೇರಿಗೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸುತ್ತಿರುವ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ ಮತ್ತು ಇದನ್ನು ಖಂಡಿಸುತ್ತೇವೆ. ಈ ಪ್ರಬಲವಾದ ತಂತ್ರಗಳಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ. ಕೇರಳ ಸರ್ಕಾರವು ಈ ಘಟನೆಯನ್ನು ತ್ವರಿತವಾಗಿ ತನಿಖೆ ಮಾಡಬೇಕು’ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಶುಕ್ರವಾರ ಟ್ವೀಟ್‌ನಲ್ಲಿ ತಿಳಿಸಿದೆ.