ಸೂಲ್ಕುದ್ರು: ಸೀತಾ ನದಿಯಲ್ಲಿ ಬಾಲಯೇಸುವಿನ ಮೂರ್ತಿ ಪತ್ತೆ!

Spread the love

ಸೂಲ್ಕುದ್ರು: ಸೀತಾ ನದಿಯಲ್ಲಿ ಬಾಲಯೇಸುವಿನ ಮೂರ್ತಿ ಪತ್ತೆ!

ಉಡುಪಿ: ಮಾಬುಕಳ ಸೇತುವೆಯ ಬಳಿ ಸೀತಾ ನದಿಯಲ್ಲಿ ಬಾಲ ಯೇಸುವಿನ ಮೂರ್ತಿಯೊಂದು ಶನಿವಾರ ಪತ್ತೆಯಾಗಿದೆ.

ಮಾಬುಕಳದ ರಿಕ್ಷಾ ಚಾಲಕರಾದ ಜೊಸೇಫ್‌ ಡಿʼಆಲ್ಮೇಡಾ ಎಂಬವರು ಬಾಡಿಗೆ ಮುಗಿಸಿ ವಾಪಾಸು ತೆರಳುತ್ತಿದ್ದ ಸಮಯದಲ್ಲಿ ನದಿಯ ದಡದಲ್ಲಿ ಮೂರ್ತಿಯೊಂದು ತೇಲುತ್ತಿರುವುದು ಕಂಡಿದ್ದು, ಹತ್ತಿರ ಹೋಗಿ ಪರಿಶೀಲಿಸಿದಾಗ ಅದು ಬಾಲ ಯೇಸುವಿನ ಮೂರ್ತಿ ಎಂದು ಕಂಡುಬಂದಿದೆ.

ಬಳಿಕ ಮೂರ್ತಿಯನ್ನು ನದಿಯಿಂದ ಮೇಲಕ್ಕೆತ್ತಿದ್ದು, ಮೂರ್ತಿ ಸಂಪೂರ್ಣ ಹಳೆಯದಾಗಿದ್ದು ಎರಡು ಕೈಗಳು ಮುರಿದಿವೆ. ಯಾರೋ ತಮ್ಮ ಮನೆಯಲ್ಲಿದ್ದ ಹಳೆಯ ಮೂರ್ತಿಯನ್ನು ನದಿಗೆ ಎಸೆದಿರಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ ಮೂರ್ತಿಯನ್ನು ಜೊಸೇಫ್‌ ಡಿʼಆಲ್ಮೇಡಾ ಅವರು ನದಿಯಿಂದ ತಂದು ಶುಚಿಗೊಳಿಸಿ ಮಾಬುಕಳದ ರಿಕ್ಷಾ ನಿಲ್ದಾಣದಲ್ಲಿ ಇರಿಸಿದ್ದಾರೆ. ಮುಂದೆ ಅದನ್ನು ಎಲ್ಲಿ ಇಡುವುದು ಎನ್ನುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

 


Spread the love