
ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗೆ ನುಗ್ಗಿದ ಕಳ್ಳರು – ಎರಡು ಕಾರುಗಳ ಕಳವು
ಮಂಗಳೂರು: ಇಲ್ಲಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಜಂಕ್ಷನ್ ಬಳಿಯಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗೆ ನುಗ್ಗಿದ ಕಳ್ಳರು ಎರಡು ಕಾರುಗಳನ್ನು ಕಳವುಗೈದು ಪರಾರಿಯಾಗಿರುವ ಘಟನೆ ಬುಧವಾರ ತಡರಾತ್ರಿ ವರದಿಯಾಗಿದೆ.
ಈ ಮಳಿಗೆ ಸೂರಲ್ಪಾಡಿ ನಿವಾಸಿ ಅಬಿದ್ ಅಹಮ್ಮದ್ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.
ಮಳಿಗೆಯ ಮುಂಭಾಗದ ಗಾಜಿನ ಬಾಗಿಲನ್ನು ಸುತ್ತಿಗೆಯಿಂದ ಹೊಡೆದು ಪುಡಿಗೈದು ಒಳ ಹೊಕ್ಕ ಕಳ್ಳರು ಕಚೇರಿಯ ಒಳಗೆ ಜಾಲಾಡಿದ್ದು, ಬಳಿಕ ಡ್ರಾವರ್ ಒಡೆದು ಅದರಲ್ಲಿ ಮಾರಾಟಕ್ಕೆ ಇಟ್ಟಿದ್ದ ಕಾರಿನ ಕಾಗದ ಪತ್ರದ ಜೊತೆಗೆ ಎರಡು ಕಾರುಗಳನ್ನು ಕಳವು ಗೈದಿದ್ದಾರೆ ಎಂದು ತಿಳಿದು ಬಂದಿದೆ.
ಕಳ್ಳರು 6 ಲಕ್ಷ ರೂ. ಮೌಲ್ಯದ ಕೆಂಪು ಬಣ್ಣದ ಸ್ವಿಫ್ಟ್ ಕಾರು, 9 ಲಕ್ಷ ರೂ. ಮೌಲ್ಯದ ಕ್ರೇಟಾ ಕಾರು ಸೇರಿ ಒಟ್ಟು 15 ಲಕ್ಷ ರೂ.ಮೌಲ್ಯದ ಎರಡು ಕಾರುಗಳನ್ನು ಕಳವು ಗೈದಿದ್ದಾರೆ ಎಂದು ತಿಳಿದು ಬಂದಿದೆ.
ರೈನ್ ಕೋಟ್ ಮತ್ತು ಹೆಲೆಟ್ ಧರಿಸಿದ್ದ ಕಳ್ಳರ ಕೈಚಳಕ ಕಚೇರಿಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಮಾಲಕ ಅಬಿದ್ ಅವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.