ಸೆ. 10-11: ಕುಂದಾಪುರದಲ್ಲಿ ಮನೋ ವೈದ್ಯರ ಸಮ್ಮೇಳನ

Spread the love

ಸೆ. 10-11: ಕುಂದಾಪುರದಲ್ಲಿ ಮನೋ ವೈದ್ಯರ ಸಮ್ಮೇಳನ

ಕುಂದಾಪುರ: ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆಯ 32ನೇಯ ವಾರ್ಷಿಕ ವೈಜ್ಞಾನಿಕ ಸಮ್ಮೇಳನ ಈ ಬಾರಿ ಕೋಟೇಶ್ವರದ ಯುವ ಮೆರಿಡಿಯನ್‍ನಲ್ಲಿ ಸಪ್ಟೆಂಬರ್ 10 ರಿಂದ 11ರವರೆಗೆ ಜರುಗಲಿದೆ ಎಂದು ಸಮ್ಮೇಳನ‌ ಸಮಿತಿ ಅಧ್ಯಕ್ಷ, ಕುಂದಾಪುರದ ಖ್ಯಾತ ಮನೋವೈದ್ಯ ಪ್ರಕಾಶ್ ತೋಳಾರ್ ಹೇಳಿದರು.

ಬುಧವಾರ ಬೆಳಿಗ್ಗೆ ಇಲ್ಲಿನ ಯುವ ಮೆರಿಡಿಯನ್ ಹೋಟೇಲ್‍ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭವು ಸೆ. 10ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದ್ದು, ಸಮಾರಂಭದ ಅಧ್ಯಕ್ಷರಾಗಿ ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಕಿರಣ ಕುಮಾರ್ ಪಿ.ಕೆ. ಉಪಸ್ಥಿತರಿರಲಿದ್ದಾರೆ. ಸಮ್ಮೇಳನದ ಮುಖ್ಯ ಅತಿಥಿಗಳಾಗಿ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‍ನಾರಾಯಣ್ ಸಿ.ಎನ್, ರಾಜ್ಯ ಹಿಂದುಳಿದ ವರ್ಗಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ನಾಡೋಜ ಡಾ. ಜಿ. ಶಂಕರ್ ಉಪಸ್ಥಿತರಿರಲಿದ್ದಾರೆ.

ಸಮ್ಮೇಳನದ ಮುನ್ನಾ ದಿನ ಸೆಪ್ಟೆಂಬರ್ 9 ರಂದು ಎರಡು ಕಡೆಗಳಲ್ಲಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಥಮ ಕಾರ್ಯಗಾರವು ಆತ್ಮಹತ್ಯೆಯನ್ನು ಅರ್ಥೈಸಿಕೊಳ್ಳುವುದು ವಿಷಯದ ಕುರಿತಾಗಿ ಉಡುಪಿ ಜಿಲ್ಲೆಯ ವೃತ್ತಿಪರ ಪತ್ರಕರ್ತಗಾಗಿ ಆಯೋಜಿಸಲಾಗಿದೆ. ಇದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ವರೆಗೆ ಉಡುಪಿಯ ಐ.ಎಂ.ಎ. ಸಭಾಂಗಣದಲ್ಲಿ ನಡೆಯಲಿದೆ. ದ್ವಿತೀಯ ಕಾರ್ಯಗಾರವು ಮಾನಸಿಕ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಕುರಿತು ಉಡುಪಿ ಜಿಲ್ಲೆಯ ಸರಕಾರಿ ವೈದ್ಯರಿಗೆ ಮತ್ತು ಐ.ಎಂ.ಎ. ಕುಂದಾಪುರದ ವೈದ್ಯರಿಗಾಗಿ ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಕೋಟೇಶ್ವರದ ಯುವ ಮೆರಿಡಿಯನ್ ಬೇ ರೆಸಾರ್ಟ್ ಮತ್ತು ಸ್ಪಾ ದಲ್ಲಿ ನಡೆಯಲಿದೆ. ಈ ಕಾರ್ಯಗಾರಕ್ಕೆ ಈಗಾಗಲೇ ನೂರಕ್ಕೂ ಅಧಿಕ ವೈದ್ಯರು ನೋಂದಾವಣಿ ಮಾಡಿಕೊಂಡಿದ್ದಾರೆ ಎಂದರು.

ಸೆ. 10 ಮತ್ತು 11 ರ ಎರಡು ದಿನಗಳ ಸಮ್ಮೇಳನದಲ್ಲಿ ಸಮುದಾಯದ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ದೊರಕುತ್ತಿರುವ ಸೇವೆಗಳ, ದೊರಕದಿರುವ ಸೌಲಭ್ಯಗಳ, ವಿನೂತನ ವಿಧಾನಗಳ ಮೂಲಕ ಮಾನಸಿಕ ಆರೋಗ್ಯ ಸೇವೆ ನೀಡುವ, ಪಿಪಿಪಿ ಮಾಡೆಲ್ ಬಗ್ಗೆ ಹಾಗೂ ಸಂಬಂಧಪಟ್ಟ ಕಾನೂನುಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಈ ವಿಚಾರಗಳ ಕುರಿತು ಉಪನ್ಯಾಸ ನೀಡಲು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ವೈದ್ಯರು ಆಗಮಿಸಲಿದ್ದಾರೆ.

ಸಮ್ಮೇಳನದ ಭಾಗವಾಗಿ ಮನೋವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ತಾವು ಸಂಶೋಧಿಸಿರುವ ವಿವಿಧ ಅಧ್ಯಯನಗಳನ್ನು ಪ್ರಸ್ತುತಪಡಿಸಲು ಅವಕಾಶ ಮಾಡಿಕೊಡಲಾಗಿದೆ. ಸಮ್ಮೇಳನಕ್ಕೆ ಈಗಾಗಲೇ 300 ಮನೋವೈದ್ಯರು ನೋಂದಾವಣೆ ಮಾಡಿಕೊಂಡಿದ್ದಾರೆ. ರಾಜ್ಯ ಮಟ್ಟದ ಸಮ್ಮೇಳನ ಕುಂದಾಪುರ ಪರಿಸರದಲ್ಲಿ ನಡೆಯುತ್ತಿರುವುದುಇದೇ ಮೊದಲ ಬಾರಿಗೆ ಎನ್ನುವುದು ವಿಶೇಷ.

ಸಮ್ಮೇಳನದ ಕಾರ್ಯದರ್ಶಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಮನೋವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ರವೀಂದ್ರ ಮುನೋಳಿ, ಹಿರಿಯ ಮನೋವೈದ್ಯ ಡಾ. ಕೆಎಸ್ ಕಾರಂತ್, ಡಾ. ನಿತಿನ್ ಶೆಟ್ಟಿ, ಡಾ. ಮಹಿಮಾ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಇದ್ದರು.


Spread the love

Leave a Reply

Please enter your comment!
Please enter your name here