ಸೆ.26 ರಿಂದ ಮೈಸೂರು ದಸರಾ ವಸ್ತುಪ್ರದರ್ಶನ

Spread the love

ಸೆ.26 ರಿಂದ ಮೈಸೂರು ದಸರಾ ವಸ್ತುಪ್ರದರ್ಶನ

ಮೈಸೂರು: ಮೈಸೂರು ವಸ್ತುಪ್ರದರ್ಶನವನ್ನು ಸೆ.26ರಿಂದ ಡಿ.12ರವರೆಗೆ 90 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಅವರು ದಸರಾ ವಸ್ತುಪ್ರದರ್ಶನ ಜನಪರವಾಗಿರಲಿದ್ದು, ಹಲವು ಆಕರ್ಷಣೆಗಳನ್ನು ಮಾಡಲಾಗಿದೆ. ಜತೆಗೆ ವಿಭಿನ್ನ ಕಾರ್ಯಕ್ರಮಗಳು ಇರಲಿದೆ ಎಂದು ಹೇಳಿದ್ದಾರೆ.

ಸ್ಯಾಂಡ್ ಮ್ಯೂಸಿಯಂ ನಿರ್ಮಾಣ ಮಾಡಲಾಗುತ್ತಿದ್ದು, ಇದರಲ್ಲಿ ಪುನೀತ್ ರಾಜ್‌ಕುಮಾರ್, ಆಜಾದಿ ಕಾ ಅಮೃತ ಮಹೋತ್ಸವದ ಥೀಮ್, ಪ್ರಧಾನಿ ನರೇಂದ್ರ ಮೋದಿ, ವೀರ ಸಾವರ್ಕರ್ ಸೇರಿದಂತೆ 7 ಕಲಾಕೃತಿಗಳು ಇರಲಿವೆ. ಇದೇ ಮೊದಲ ಬಾರಿಗೆ ಯೋಗ 3ಡಿ ವಿಡೀಯೋ ಮ್ಯಾಪಿಂಗ್ ನಿರ್ಮಿಸಲಾಗುತ್ತಿದ್ದು, ಬಹುಮಾಧ್ಯಮ ಕಲಾ ಗ್ಯಾಲರಿಯೂ ಇರಲಿದೆ.

ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ವತಿಯಿಂದ ಸಸಿಗಳು ಹಾಗೂ ಕೃಷಿ ಪರಿಕರಗಳನ್ನು ವಸ್ತುಪ್ರದರ್ಶನ ಪ್ರಾಧಿಕಾರದ ಮಳಿಗೆಗಳಲ್ಲಿ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ. ವಸ್ತುಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪ್ರಾಧಿಕಾರದ ವತಿಯಿಂದ ವ್ಯವಸ್ಥಿತವಾಗಿ ವಿತರಿಸಲು ಆರ್‌ಒ ಪ್ಲಾಂಟ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ವಸ್ತುಪ್ರದರ್ಶನ ಆವರಣದ ಸ್ವಚ್ಛತೆ ಕಾಪಾಡಲು ಕ್ರಮ ವಹಿಸಲಾಗಿದ್ದು, ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸಲಾಗಿದೆ. ಮಾಹಿತಿ ಕೇಂದ್ರ, ಪೊಲೀಸ್ ಉಪಠಾಣೆ, ಅಗ್ನಿಶಾಮಕ ವಾಹನ ಹಾಗೂ ಪ್ರಥಮ ಚಿಕಿತ್ಸಾ ಘಟಕ ತೆರೆಯಲು ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕರಿಗೆ ವಸ್ತುಪ್ರದರ್ಶನದಲ್ಲಿನ ಮಳಿಗೆಗಳ ಮಾಹಿತಿ ನೀಡುವ ಸಲುವಾಗಿ ಡಿಜಿಟಲ್ ಆಪ್ ಸೌಲಭ್ಯ ಕಲ್ಪಿಸಲಾಗಿದೆ. ಟಿಕೆಟ್ ಕೌಂಟರ್ ಬಳಿ ಆಪ್ ಡೌನ್‌ಲೋಡ್ ಮಾಡಿಕೊಂಡು ವಸ್ತುಪ್ರದರ್ಶನದ ಸಂಪೂರ್ಣ ನಕ್ಷೆ ಹಾಗೂ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಕ್ರಮ ವಹಿಸಲಾಗುತ್ತದೆ. ವಯಸ್ಕರಿಗೆ 30, ಮಕ್ಕಳಿಗೆ 20 ರೂ ಪ್ರವೇಶದರ ನಿಗದಿಪಡಿಸಲಾಗಿದೆ ಎಂದರು.

ಎ ಮತ್ತು ಬಿ ಬ್ಲಾಕ್ ಮಳಿಗಗಳು, ಸಿಬ್ಲಾಕ್ ಮಳಿಗೆಗಳು, ತಿಂಡಿ ತಿನಿಸು ಮಳೆಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ದಸರಾ ವಸ್ತುಪ್ರದರ್ಶನದ ಅವಧಿಯಲ್ಲಿ ಈ ಬಾರಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖಾ ಮಳಿಗೆಗಳು, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ, ವಾರ್ತಾ ಇಲಾಖೆ ಮತ್ತು ವಿಶೇಷ ಆಕರ್ಷಣೀಯ ಮಳಿಗೆಗಳಿರುತ್ತವೆ. ಈ ಬಾರಿ ಮಳೆಯಿಂದಾಗುವ ಅನಾಹುತ ತಡೆಗೂ ಕ್ರಮ ಕೈಗೊಳ್ಳಲಾಗಿರುವುದಾಗಿ ಅವರು ತಿಳಿಸಿದ್ದಾರೆ.


Spread the love