ಸೆ.27ರಿಂದ ಚಾಮರಾಜನಗರ ದಸರಾ ಮಹೋತ್ಸವ

Spread the love

ಸೆ.27ರಿಂದ ಚಾಮರಾಜನಗರ ದಸರಾ ಮಹೋತ್ಸವ

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವವನ್ನು ಸೆ.27ರಿಂದ 30ರವರೆಗೆ ನಾಲ್ಕು ದಿನಗಳ ಕಾಲ ಅದ್ಧೂರಿ ಹಾಗೂ ವೈವಿಧ್ಯಮಯವಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಸಜ್ಜುಗೊಳಿಸುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚನೆ ನೀಡಿದರು.

ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮಿತಿ ಸಭಾಂಗಣದಲ್ಲಿಂದು ಚಾಮರಾಜನಗರ ದಸರಾ ಮಹೋತ್ಸವ ಸಂಬಂಧ ಜಿಲ್ಲೆಯ ಶಾಸಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಲ್ಲಿ ದಸರಾ ಅದ್ದೂರಿ ಆಚರಣೆಗೆ ಸಾಧ್ಯವಾಗಿರಲಿಲ್ಲ. ಐತಿಹಾಸಿಕ ಪರಂಪರೆ ಹಿನ್ನೆಲೆಯಿರುವ ದಸರಾ ಮಹೋತ್ಸವವನ್ನು ಮುಂದಿನ ಪೀಳಿಗೆಗೂ ಕೊಂಡೋಯ್ಯಬೇಕಿದೆ. ಈ ಉದ್ದೇಶದಿಂದ ಜಿಲ್ಲೆಯಲ್ಲಿ ದಸರಾ ಮಹೋತ್ಸವ ಈ ಬಾರಿ ಹೆಚ್ಚು ವಿಜೃಂಭಣೆಯಿಂದ ನಡೆಯಬೇಕು. ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಡೆಯಬೇಕು ಎಂದು ಸಚಿವರು ತಿಳಿಸಿದರು.

ನಗರದ ಚಾಮರಾಜೇಶ್ವರ ದೇವಾಲಯದ ಬಳಿ ದಸರಾ ಮಹೋತ್ಸವದ ಪ್ರಧಾನ ವೇದಿಕೆ ಅಚ್ಚುಕಟ್ಟಾಗಿ ಹಾಗೂ ವೈಭವಯುತವಾಗಿ ಇರಬೇಕು. ಈ ಬಾರಿ ದೀಪಾಲಂಕಾರ ವಿಶೇಷವಾಗಿ ಆಗಬೇಕು. ಸರ್ಕಾರಿ ಕಟ್ಟಡಗಳು, ಪ್ರಮುಖ ವೃತ್ತಗಳು, ರಸ್ತೆಗಳು, ಇತರೆ ಕಡೆಗಳಲ್ಲಿಯೂ ಝಗಮಗಿಸುವ ದೀಪಾಲಂಕಾರ ಮಾಡಬೇಕು. ಜಿಲ್ಲಾ ಕೇಂದ್ರದ ಎಲ್ಲಾ ದಿಕ್ಕಿನ ಪ್ರವೇಶ ದ್ವಾರಗಳಲ್ಲಿ ಸ್ವಾಗತ ಕಮಾನುಗಳು ದೀಪಾಲಂಕಾರದಿಂದ ಕೂಡಿರಬೇಕು. ತಾಲೂಕು ಕೇಂದ್ರಗಳಲ್ಲಿಯೂ ಸಹ ಗ್ರಾಮೀಣ ದಸರಾ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ದೀಪಾಲಂಕಾರ ಆಗಬೇಕು. ಜಿಲ್ಲೆಯ ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಕಳೆಗಟ್ಟಬೇಕು ಎಂದು ಸಚಿವರು ಸೆಸ್ಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ಮೂಡಿಬರಬೇಕು. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಬೇಕು. ಹೊರ ಭಾಗದ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮಗಳು ಅದ್ದೂರಿಯಾಗಿ ಪ್ರಸ್ತುತ ಪಡಿಸುವಂತಾಗಬೇಕು. ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಪ್ರಾಧಾನ್ಯತೆ ನೀಡಿ ಉತ್ತಮವಾಗಿ ದಸರಾ ಕಾರ್ಯಕ್ರಮಗಳು ನಡೆಯಬೇಕು ಎಂದು ಸಚಿವರು ತಿಳಿಸಿದರು.

ಕಲಾತಂಡಗಳ ಮೆರವಣಿಗೆ, ಸ್ತಬ್ದ ಚಿತ್ರಗಳ ಪ್ರದರ್ಶನಗಳೂ ಸಹ ಅರ್ಥಪೂರ್ಣವಾಗಿ ಮೂಡಿಬರಲಿ. ರೈತ ದಸರಾ, ಮಹಿಳಾ ದಸರಾ ಸೇರಿದಂತೆ ಇನ್ನಿತರ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಏರ್ಪಾಡಾಗಬೇಕು. ಪೂಜಾ ಕೈಂಕರ್ಯಗಳು ಅಚ್ಚುಕಟ್ಟಾಗಿ ನೆರವೇರಲಿ. ದಸರಾ ವೇಳೆ ಸ್ವಚ್ಚತೆಗೆ ಹೆಚ್ಚು ಗಮನನೀಡಿ, ಎಲ್ಲಾ ಕಡೆಯೂ ಶುಚಿತ್ವ ವಹಿಸುವ ಕೆಲಸ ಬೇಗನೆ ಪೂರ್ಣಗೊಳಿಸಿ. ಎಲ್ಲಿಯೂ ಲೋಪವಾಗದ ಹಾಗೆ ಕಾರ್ಯಕ್ರಮಗಳನ್ನು ನಿರ್ವಹಿಸಿ ಎಂದು ಸಚಿವರು ನಿರ್ದೇಶನ ನೀಡಿದರು.


Spread the love

Leave a Reply

Please enter your comment!
Please enter your name here