ಸೆ.3ರಂದು ಶಿಕ್ಷಕರ ಅರ್ಹತಾ ಪರೀಕ್ಷೆ: ಅಗತ್ಯ ಕ್ರಮಗಳಿಗೆ ಎಡಿಸಿ ಡಾ. ಸಂತೋಷ್ ಕುಮಾರ್ ಸೂಚನೆ

Spread the love

ಸೆ.3ರಂದು ಶಿಕ್ಷಕರ ಅರ್ಹತಾ ಪರೀಕ್ಷೆ: ಅಗತ್ಯ ಕ್ರಮಗಳಿಗೆ ಎಡಿಸಿ ಡಾ. ಸಂತೋಷ್ ಕುಮಾರ್ ಸೂಚನೆ

ಮಂಗಳೂರು: ಇದೇ ಸೆ.3ರ ಭಾನುವಾರ ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಸುಸೂತ್ರ ನಡೆಯಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಆ.30ರಂದು ಹಮ್ಮಿಕೊಂಡಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರೀಕ್ಷೆಗೆಂದು ಜಿಲ್ಲೆಯಲ್ಲಿ 15ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊದಲನೇ ಪತ್ರಿಕೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ 10 ಕೇಂದ್ರಗಳಲ್ಲಿ ನಡೆಯಲಿದೆ. ಎರಡನೇ ಪತ್ರಿಕೆ 15 ಕೇಂದ್ರಗಳಲ್ಲಿ 2 ಗಂಟೆಯಿಂದ ಸಂಜೆ 4.30ರ ವರೆಗೆ ನಡೆಯಲಿದ್ದು, ಮೊದಲ ಪತ್ರಿಕೆಯನ್ನು 2,430 ಮಂದಿ ಹಾಗೂ ಎರಡನೇ ಪತ್ರಿಕೆಯನ್ನು 3,733 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 328 ಕೊಠಡಿ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಕೇಂದ್ರದಲ್ಲೂ ಒಂದು ಮೊಬೈಲ್ ಸ್ವಾಧೀನಾಧಿಕಾರಿ ಇರುತ್ತಾರೆ ಎಂದರು.
ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ, ಸೂಕ್ತ ವೈದ್ಯಕೀಯ ವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಅನಾವಶ್ಯಕ ಸಂಚಾರದಿಂದ ಎಚ್ಚರವಹಿಸಬೇಕು, ಪರೀಕ್ಷಾ ವೇಳೆಯಲ್ಲಿ ಜೆರಾಕ್ಸ್ ಅಂಗಡಿ ಮುಚ್ಚಿರಬೇಕು, ಪರೀಕ್ಷೆ ನಡೆಯುವ ಎಲ್ಲಾ ಕೊಠಡಿಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಬೇಕು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲು ಮೆಸ್ಕಾಂಗೆ ಸೂಚನೆ ನೀಡಬೇಕು, ಮುಖ್ಯವಾಗಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯ ಓಎಂಆರ್ ಅನ್ನು ಸರಿಯಾಗಿ ಪರೀಕ್ಷಿಸಲು ಸಂಬಂಧಿಸಿದವರಿಗೆ ಸೂಚನೆ ನೀಡುವಂತೆ ಅವರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಯಾನಂದ್ ರಾಮಚಂದ್ರ ನಾಯ್ಕ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ವಿವಿಧ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು ಹಾಗೂ ಸಂಬಂಧಿಸಿದವರು ಸಭೆಯಲ್ಲಿದ್ದರು.

Spread the love