ಸೌಜನ್ಯಾ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ ಹೋರಾಟ -ರವಿಕೃಷ್ಣಾ ರೆಡ್ಡಿ

Spread the love

ಸೌಜನ್ಯಾ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ ಹೋರಾಟ -ರವಿಕೃಷ್ಣಾ ರೆಡ್ಡಿ
 

ಬೆಳ್ತಂಗಡಿ: ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಧರ್ಮಸ್ಥಳದ ಸೌಜನ್ಯಾಗೆ ನ್ಯಾಯ ಒದಗಿಸಬೇಕು. ‌ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಿ, ಈ ಅಪರಾಧವೆಸಗಿದವರಿಗೆ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷವು ಇಲ್ಲಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಶನಿವಾರ ಆರಂಭಿಸಿತು.

ಪಾದಯಾತ್ರೆಗೆ ಇಲ್ಲಿ ಚಾಲನೆ ನೀಡಿದ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ,’ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಗಳು ಮೌನ ವಹಿಸುವ ಮೂಲಕ ಉಳ್ಳವರ ಪರವಾಗಿ ನಿಂತಿವೆ ಎಂಬುದು ಸ್ಪಷ್ಟ. ಪಾದಯಾತ್ರೆಯಲ್ಲಿ ಸಾಗಿ ವಿಧಾನಸೌಧದ ಮುಂದೆ ಧರಣಿ ನಡೆಸಲಿದ್ದೇವೆ’ ಎಂದರು.

‘ಸೌಜನ್ಯಾಳ ಕೂಗು ನಮ್ಮ ಮನೆ ಹೆಣ್ಣುಮಕ್ಕಳ ಕೂಗು ಇದ್ದಂತೆ. ಆಕೆ ಮೇಲೆ ನಡೆದ ದೌರ್ಜನ್ಯದ ವಿರುದ್ಧ ‘ಸೌಜನ್ಯಾ’ ಎಂಬ ಹೆಸರಿನಡಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಎಲ್ಲ ಪ್ರಜ್ಞಾವಂತ ಸಾರ್ವಜನಿಕರು ಇದರಲ್ಲಿ ಭಾಗವಹಿಸಲಿದ್ದಾರೆ. ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ‘ಈ ಪ್ರಕರಣದಲ್ಲಿ ನಿರಪರಾಧಿ ಅನ್ಯಾಯವಾಗಿ ಶಿಕ್ಷೆ ಅನುಭವಿಸಿದ್ದಾನೆ. ಪ್ರಕರಣದ ಮರುತನಿಖೆ ನಡೆಸಿ ನಿಜವಾದ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಬೇಕು. ತನ್ನ ಅಧಿಕಾರವನ್ನು ಬಳಸಿ ಸರ್ಕಾರ ಕ್ರಮಕೈಗೊಳ್ಳಲೇಬೇಕು’ ಎಂದು ಒತ್ತಾಯಿಸಿದರು.

‘ಈ ಪ್ರಕರಣ ಮುಗಿದ ಅಧ್ಯಾಯ’ ಎಂದು ರಾಜ್ಯದ ಗೃಹಸಚಿವ ಜಿ.ಪರಮೇಶ್ವರ ಹೇಳಿಕೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾದರಷ್ಟೆ ಅದು ಮುಗಿದ ಅಧ್ಯಾಯ ಎನಿಸಿಕೊಳ್ಳುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗದ ಹೊರತು ‌ಪ್ರಕರಣ ಮುಕ್ತಾಯವಾಗಲು ಸಾಧ್ಯವಿಲ್ಲ. ಅದನ್ನು ಕೇಳಲು ನಾವಿದ್ದೇವೆ. ಪಾದಯಾತ್ರೆ ಮೂಲಕ ತೆರಳಿ ನಾವು ವಿಧಾನ ಸೌಧದಲ್ಲೇ ಗೃಹಸಚಿವರನ್ನು ಈ ಬಗ್ಗೆ ಆಗ್ರಹಿಸಲಿದ್ದೇವೆ. ಎಲ್ಲರೂ ಕೆಆರ್‌ಎಸ್ ಪಕ್ಷದೊಂದಿಗೆ ಹೆಜ್ಜೆ ಹಾಕಬೇಕು’ ಎಂದರು.

‘ಪಾದಯಾತ್ರೆಯುಧರ್ಮಸ್ಥಳ- ಉಜಿರೆ- ಚಾರ್ಮಾಡಿ- ಕೊಟ್ಟಿಗೆಹಾರ- ಮೂಡಿಗೆರೆ- ಬೇಲೂರು- ಹಾಸನ ಮಾರ್ಗವಾಗಿ ಬೆಂಗಳೂರು ತಲುಪಲಿದೆ. 14 ದಿನಗಳ ಈ ಪಾದಯಾತ್ರೆಯಲ್ಲಿ 330 ಕಿ.ಮೀ.ಕ್ರಮಿಸಲಿದ್ದೇವೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಪಿರೇರಾ ತಿಳಿಸಿದರು.


Spread the love