
ಸೌಜನ್ಯ ಪ್ರಕರಣದ ಆರೋಪಿಗಳಿಗೆ ಕೊರಗಜ್ಜನಿಂದ ಹುಚ್ಚು ಕಟ್ಟಿಸಲೂ ಗೊತ್ತಿದೆ : ರೋಹಿತ್ ಉಳ್ಳಾಲ್
ಉಳ್ಳಾಲ: ಕೊರಗಜ್ಜನಿಗೆ ಹುಚ್ಚು ಕಟ್ಟಿಸಲು ಗೊತ್ತಿದೆ, ಹುಚ್ಚನಾಗಿಸಲು ಗೊತ್ತಿದೆ, ಸೌಜನ್ಯ ಅತ್ಯಾಚಾರ ಹತ್ಯೆ ಪ್ರಕರಣದ ಆರೋಪಿಗಳ ಬಂಧನ ಶೀಘ್ರವೇ ಆಗಲಿದೆ. ಕೊರಗಜ್ಜನಲ್ಲಿನ ಪ್ರಾರ್ಥನೆ ಆರೋಪಿಗಳನ್ನು ಸುಮ್ಮನೆ ಇರಲು ಬಿಡಲಾರದು ಎಂದು ಧಾರ್ಮಿಕ ಮುಖಂಡ ರೋಹಿತ್ ಉಳ್ಳಾಲ್ ಹೇಳಿದ್ದಾರೆ.
ಅವರು ದಿವ್ಯಜ್ಯೋತಿ ಕ್ರಿಕೆಟರ್ಸ್ ನೇತೃತ್ವದಲ್ಲಿ ಸೌಜನ್ಯ ಪ್ರಕರಣದಲ್ಲಿ ಆಗಿರುವ ಅನ್ಯಾಯದ ವಿರುದ್ಧ ಪಂಡಿತ್ ಹೌಸ್ ದಿವ್ಯಜ್ಯೋತಿ ಕ್ರಿಕೆಟರ್ಸ್ ಕಟ್ಟೆಯಿಂದ ಕುತ್ತಾರು ಕೊರಗಜ್ಜನ ಮೂಲಸ್ಥಾನ ವರೆಗಿನ ಪಾದಯಾತ್ರೆ ಹಾಗೂ ಕೊರಗಜ್ಜನ ಕಟ್ಟೆಯಲ್ಲಿ ಹಮ್ಮಿಕೊಳ್ಳಲಾದ ಸಾಮೂಹಿಕ ಪ್ರಾರ್ಥನೆಗೆ ಚಾಲನೆ ನೀಡಿ ಮಾತನಾಡಿದರು.
ಕೊರಗಜ್ಜ ಫಲ ಕೊಡುತ್ತಾನೆಂಬ ವಿಶ್ವಾಸವಿದೆ. ಕಾರಣಿಕ ದೈವದ ಮುಂದೆ ಸಲ್ಲಿಸುವ ಪ್ರಾರ್ಥನೆಯಿಂದ ಸೌಜನ್ಯ ಕುಟುಂಬ ಇಡುತ್ತಿರುವ ಕಣ್ಣೀರು ಕೊನೆಯಾಗಬೇಕಿದೆ. ಪ್ರಕರಣದಲ್ಲಿ ಧರ್ಮಕ್ಷೇತ್ರ, ವ್ಯಕ್ತಿಯನ್ನು ಹೊಣೆಯನ್ನಾಗಿಸುವುದು ಸರಿಯಾದ ಮಾರ್ಗವಲ್ಲ. ಏಳು ಕಲ್ಲಿನಲ್ಲಿ ನೆಲೆಯಾಗಿರುವ ಕೊರಗಜ್ಜನ ಕಾರಣಿಕ ಶಕ್ತಿಯೇ ಪ್ರಧಾನವಾಗಿದ್ದು, ಎಂದಿಗೂ ಹೆಣ್ಣು ಹೆತ್ತವರ ಬಾಳನ್ನು ಬೆಳಕಾಗಿಸದೇ ಬಿಡದು ಎಂದರು.
ಬಜರಂಗದಳ ಮುಖಂಡ ಪ್ರವೀಣ್ ಕುತ್ತಾರ್ ಮಾತನಾಡಿ, ಅನ್ಯಾಯಕ್ಕೊಳಗಾದ ಸೌಜನ್ಯ ಕುಟುಂಬ ಪರ ಎಲ್ಲರೂ ಇದ್ದೇವೆ. ಮುಂದೆಂದೂ ಇಂತಹ ಘೋರ ಕೃತ್ಯಗಳು ನಡೆಯದಿರಲಿ. ಧರ್ಮಸ್ಥಳ ಕ್ಷೇತ್ರದ ಹೆಸರು ಹಾಳುಮಾಡಬಾರದು. ಕಡಿವಾಣ ಆಗಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಿರಂತರ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ , ಜಿ.ಪಂ ಮಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ಕುತ್ತಾರ್, ದಿವ್ಯಜ್ಯೋತಿ ಕ್ರಿಕೆಟರ್ಸ್ ಅಧ್ಯಕ್ಷ ಗಣೇಶ ನಾಯ್ಕ್, ಸತೀಶ್ ಪೂಜಾರಿ ಉಪಸ್ಥಿತರಿದ್ದರು.