ಸೌದಿ ಅರೇಬಿಯಾದಲ್ಲಿ ಹರಡಿದ ಕನ್ನಡದ ಕಂಪು, ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ  ಕರುನಾಡ ಸಂಭ್ರಮ-2021 

Spread the love

ಸೌದಿ ಅರೇಬಿಯಾದಲ್ಲಿ ಹರಡಿದ ಕನ್ನಡದ ಕಂಪು, ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ  ಕರುನಾಡ ಸಂಭ್ರಮ-2021  

ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಕರುನಾಡ ಸಂಭ್ರಮ-2021” ಕುಟುಂಬ ಸಮ್ಮಿಲನ ಕಾರ್ಯಕ್ರಮವು ನವೆಂಬರ್ 25 ರಂದು ರಿಯಾದಿನ ವಾಹತ್ ಅಲ್ ರಿಯಾದ್ ಫಾರ್ಮ್ ಹೌಸ್ ನಲ್ಲಿ ಅದ್ದೂರಿಯಾಗಿ ಜರುಗಿತು.

ಸಹಸ್ರ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ಪಾಲ್ಗೊಂಡ ಈ ಕಾರ್ಯಕ್ರಮದ ಸಭಾ ಕಾರ್ಯಕ್ರಮವು ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿ ಇದರ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ನಡೆಸುತ್ತಿರುವ ಸಾಮಾಜಿಕ ಸೇವೆಯನ್ನು ಹಾಗು ಸಂಘಟನೆಯ ಮಹತ್ವ ಮತ್ತು ಅವಶ್ಯಕತೆಯ ಬಗ್ಗೆ ನೆರೆದಂತಹ ಸಭಿಕರಿಗೆ ವಿವರಿಸಿದರು. ಕಾರ್ಯಕ್ರಮವನ್ನು ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜನಾಬ್ ಬಶೀರ್ ಕಾರಂದೂರು ಉದ್ಘಾಟಿಸುತ್ತಾ ದೇಶದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತಾ ಇದಕ್ಕಾಗಿ ಎಲ್ಲ ಸಮಾನ ಮನಸ್ಕರು ಜೊತೆಗೂಡಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರಾದ ಮೊಹಮ್ಮದ್ ನವೀದ್ ರವರು ಕರ್ನಾಟಕದಲ್ಲಿ ವಿವಿಧ ಜಾತಿ, ಮತ ಮತ್ತು ಧರ್ಮದ ಜನರಿದ್ದಾರೆ. ಪ್ರತಿಯೊಬ್ಬರ ಆಚಾರ ವಿಚಾರಗಳಲ್ಲಿ ಸಾಕಷ್ಟು ಬಿನ್ನಾಭಿಪ್ರಾಯಗಳಿವೆ. ಆದರೂ ಈ ನಾಡಿನ ನೆಲ, ಜಲ ಮತ್ತು ಸ್ವಾಭಿಮಾನದ ವಿಚಾರ ಬಂದಾಗ ನಾವೆಲ್ಲ ಪರಸ್ಪರ ಭಿನ್ನಾಭಿಪ್ರಾಯ ಬಿಟ್ಟು ಒಂದಾಗುತ್ತೇವೆ. ಆದರೆ ಇಂದು ಕೇಂದ್ರ ಒಕ್ಕೂಟ ಸರ್ಕಾರ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮತ್ತು ಸಂಪತ್ತು ಹಂಚಿಕೆ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಮತ್ತು ಪ್ರಸ್ತುತ ಕರ್ನಾಟಕವು ಬಿಜೆಪಿ ಅಧಿಕಾರದಲ್ಲಿ ಉತ್ತರ ಪ್ರದೇಶ ಮಾದರಿಯಲ್ಲಿ ಜಂಗಲ್ ರಾಜ್ ಆಗುತ್ತಿರುವ ಬಗ್ಗೆ ಆತಂಕ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ ಕರ್ನಾಟಕ ಚಾಪ್ಟರ್ ರಿಯಾದ್ ನ ಅಧ್ಯಕ್ಷರಾದ ತಾಜುದ್ದೀನ್ ಪುತ್ತೂರು, ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಮುಸ್ತಾಕ್ ಕಸಮ್, ಖಿದ್ಮ ಫೌಂಡೇಶನ್ ನ ಅಧ್ಯಕ್ಷರಾದ ಫಝ್ಲು ರೆಹ್ಮಾನ್, ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಜಿ.ಕೆ. ಶೇಕ್, ಮಲೆನಾಡು ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ನಝೀರ್ ಮಡತಿಲ್, ಬಸ್ರುರು ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನ ಹನೀಫ್ ಬಸ್ರುರು, ರಿಯಾದ್ ಮೊಬೈಲ್ ಮೆಡಿಕಲ್ ಟೀಮ್ ನ (ಅರೋಗ್ಯ ಸಚಿವಾಲಯ) ಮುಖ್ಯಸ್ಥರಾದ ಡಾಕ್ಟರ್ ಕೈಸರ್ ಪರ್ವೇಜ್ ಮತ್ತು ಹಿದಾಯ ಫೌಂಡೇಶನ್ ನ ಅಧ್ಯಕ್ಷರಾದ ಮೊಹಮ್ಮದ್ ಅಲಿ ಬಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಸಿರಾಜ್ ಸಜಿಪ ಸ್ವಾಗತಿಸಿದರೆ, ರಾಜ್ಯ ಸಮಿತಿ ಕಾರ್ಯದರ್ಶಿಯಾದ ಜವಾದ್ ಬಸ್ರುರು ಧನ್ಯವಾದ ಸಮರ್ಪಿಸಿದರು. ಶರೀಫ್ ಕಬಕರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಸಕ್ತ ಸನ್ನಿವೇಶದ ಮೇಲೆ ಬೆಳಕು ಚೆಲ್ಲುವ “ನಮ್ಮ ಬದುಕು ನಮ್ಮ ಹೆಮ್ಮೆ”ಎಂಬ ಕಿರು ಹಾಸ್ಯ ಪ್ರಹಸನವು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು. ಕಾರ್ಯಕ್ರಮದಲ್ಲಿ ಅಳಿದು ಹೋದ ಇತಿಹಾಸವನ್ನು ಮರು ಸೃಷ್ಟಿಸುವ ನಿಟ್ಟಿನಲ್ಲಿ ಭಾರತದ ಸುವರ್ಣ ಇತಿಹಾಸದ 3D ಎಕ್ಸ್ಪೋ (EXPO) ಸಭಿಕರನ್ನು ಮತ್ತೊಮ್ಮೆ ಐತಿಹಾಸಿಕ ಲೋಕಕ್ಕೆ ಕೊಂಡೊಯಿತು. ಪುರುಷರು ಮಕ್ಕಳು ಮತ್ತು ಮಹಿಳೆಯರಿಗಾಗಿ ವಿಶೇಷ ಕ್ರೀಡಾಕೂಟ ಹಾಗು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಆಕರ್ಷಕ ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು. ಮಂಗಳೂರಿನ ಕೋಮ್ ಕ್ವೆಸ್ಟ್ ಸೊಲ್ಯೂಶನ್ ವತಿಯಿಂದ ನಡೆದ ಅದೃಷ್ಠದ ಲಕ್ಕಿಕೂಪನ್ ಡ್ರಾನಲ್ಲಿ 10 ಅದೃಷ್ಠಶಾಲಿಗಳಿಗೆ ವಂಡರ್ಲಾಗೆ ಉಚಿತ ಟಿಕೇಟ್ ನೀಡಲಾಯಿತು.

ಸಾಕಷ್ಟು ಕುತೂಹಲ ಕೆರಳಿಸಿದ ಹಗ್ಗ ಜಗ್ಗಾಟ ಫೈನಲ್ ಹಣಾಹಣಿಯಲ್ಲಿ ಮಲಝ್ ಗೈಸ್ ತಂಡವನ್ನು ಸೋಲಿಸುವುದರ ಮೂಲಕ ಬಂಟ್ವಾಳ ಗೈಸ್ ಕರುನಾಡ ಸಂಭ್ರಮ-2021 ಚೊಚ್ಚಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಇನ್ನು ಕ್ರಿಕೆಟ್ ಪಂದ್ಯಾಟದಲ್ಲಿ ಲಗಾನ್ ಕ್ರಿಕೆಟರ್ಸ್ ತಂಡವು ವಿಜಯಿಯಾಗಿ, ಬಂಟ್ವಾಳ ಗೈಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು.

Click Here To View More Photos


Spread the love