ಸೌಹಾರ್ದತೆಗೆ ಧಕ್ಕೆ ತರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ- ರಮೇಶ್ ಕಾಂಚನ್
ಉಡುಪಿ: ಬ್ರಹ್ಮಾವರದ ಕುಂಜಾಲಿನಲ್ಲಿ ಗೋ ಹತ್ಯೆ ಮಾಡಿ ಅದರ ರುಂಡ ಮತ್ತು ಕಾಲುಗಳನ್ನು ರಸ್ತೆಗೆ ಎಸೆದ ಕೃತ್ಯದ ಹಿಂದೆ ಜಿಹಾದಿ ವ್ಯಕ್ತಿಗಳ ಕೈವಾಡ ಇದೆ ಎಂದು ಹೇಳಿರುವ ವಿಶ್ವ ಹಿಂದೂ ಪರಿಷದ್ ನಾಯಕ ಶರಣ್ ಪಂಪ್ ವೆಲ್ ಅವರನ್ನು ಕೂಡಲೇ ಬಂಧಿಸಿ ಅವರ ಹೇಳಿಕೆ ಕುರಿತು ಇರುವ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪಡೆಯಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.
ಶರಣ್ ಪಂಪ್ ವೆಲ್ ಅವರು ಈಗಾಗಲೇ ತಮ್ಮ ಕೋಮು ಪ್ರಚೋದನಾತ್ಮಕ ಹೇಳಿಕೆಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಸೃಷ್ಠಿಸುವ ಕೆಲಸ ಮಾಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಅವರು ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಉಡುಪಿಗೆ ಆಗಮಿಸಿ ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿರುವ ಜನರ ಮಧ್ಯೆ ಅನುಮಾನ ಮತ್ತು ದ್ವೇಷದ ವಿಷ ಬೀಜ ಬಿತ್ತುವ ಕೆಲಸ ಮಾಡುವುದಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಅವಕಾಶ ನೀಡಬಾರದು.
ಬ್ರಹ್ಮಾವರದ ಕುಂಜಾಲಿನಲ್ಲಿ ಗೋ ಹತ್ಯೆ ಮಾಡಿ ಅದರ ರುಂಡ ಮತ್ತು ಕಾಲುಗಳನ್ನು ರಸ್ತೆಗೆ ಎಸೆದ ಆರೋಪಿಗಳು ಹಿಂದೂಗಳಾಗಿದ್ದು ಅವರನ್ನು ಬಳಸಿಕೊಂಡು ಜಿಹಾದಿ ಶಕ್ತಿಗಳು ಕರ್ತವ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳೀದ್ದು ಅವರಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇರುವ ಸಂಶಯವಿದ್ದು ಕೂಡಲೇ ಅವರನ್ನು ಬಂಧಿಸಿ ಅವರಿಂದ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕು. ಈ ಮೂಲಕ ಜಿಲ್ಲೆಯ ಶಾಂತಿಯನ್ನು ಕಾಪಾಡುವ ಕೆಲಸವನ್ನು ಪೊಲೀಸರು ಮಾಡಬೇಕು ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ